ಸಾರಾಂಶ
ಅಂಕೋಲಾ:
ಜನರ ತೆರಿಗೆಯ ರೂಪದಲ್ಲಿ ಕಟ್ಟಿದ ಹಣವನ್ನು ಅಭಿವೃದ್ಧಿಯ ರೂಪದಲ್ಲಿ ಜನರಿಗೆ ವಾಪಸ್ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಮ್ಮ ಸೇವಕರಾಗಿದ್ದಾರೆ. ಇದನ್ನರಿತು ಅಧಿಕಾರಿಗಳು ಜನರ ಕೆಲಸ ಮಾಡಿಕೊಡಿ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಇರಲು ನಾನು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಖಡಕ್ ಎಚ್ಚರಿಕೆ ನೀಡಿದರು.ಅವರು ಭಾವಿಕೇರಿಯಲ್ಲಿ ನಡೆದ ಜನಸ್ಪಂದನಾ ಹಾಗೂ ಆದೇಶ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನರ ಕುಂದು-ಕೊರತೆ ಕಣ್ಣಾರೆ ಕಂಡು ಸ್ಥಳದಲ್ಲಿಯೇ ಆದಷ್ಟು ಪರಿಹರಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಾದ ತೀರ್ಮಾನಗಳಿಗೆ ಆದ ಪ್ರಗತಿಯ ವರದಿಯ ಮೇಲೆ ಹದ್ದಿನ ಕಣ್ಣು ಇಡಲಾಗುವುದು. ಹೀಗಾಗಿ ಈ ಕಾರ್ಯಕ್ರಮ ನಾಮಕಾವಾಸ್ತೆ ಆಗಿರದೆ ಜನರ ಆಶೋತ್ತರಗಳಿಗೆ ವೇದಿಕೆಯಾಗಲಿದೆ ಎಂದರು.ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದವರ ಮನೆಯ ಬಾಗಿಲಿಗೆ ತೆರಳಿ ಅವರ ಕುಂದು-ಕೊರತೆ ಆಲಿಸಲು ಅಧಿಕಾರಿಗಳನ್ನು ಅವರ ಮನೆಗೆ ಕಳುಹಿಸಿ ಮಾಹಿತಿ ಸಂಗ್ರಹಿಸುವ ವಿನೂತನ ಕಾರ್ಯಕ್ರಮ ಜಾರಿಗೆ ತರುತ್ತಿದ್ದೇವೆ ಎಂದು ಸಚಿವರು ತಿಳಿಸಿದರು. ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ಸಮಸ್ಯೆಗೆ ಪರಿಹಾರ ಸೂಚಿಸಿದ ಸಚಿವರು, ಸುಕ್ರಜ್ಜಿಯ ಮೊಮ್ಮಗಳಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು.ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿ, (ಎನ್ಎ) ಭೂ ಪರಿವರ್ತನೆ ನಂತರ ಮಧ್ಯ ರಸ್ತೆಯಿಂದ 40 ಮೀಟರ್ ವರೆಗೆ ಮೀಸಲಿಡಬೇಕೆಂಬ ನಿಯಮವಿದೆ. 40 ಮೀ ಜಾಗ ಮೀಸಲಿಟ್ಟರೆ ಜಮೀನಿನ ಮಾಲಿಕನಿಗೆ ಕಟ್ಟಡ ಕಟ್ಟಲು ಜಾಗವೇ ಇರುವುದಿಲ್ಲ. ಇದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ದಯಮಾಡಿ ಸಮಸ್ಯೆ ಸರಿಪಡಿಸಿ ಕೊಡಿ ಎಂದರು. ಇದಕ್ಕೆ ಸ್ಪಂದಿಸಿದ ಸಚಿವರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.ಈ ವೇಳೆ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯ ಭೂ ಅತಿಕ್ರಮಣ ಮಾಡಿಕೊಂಡಿರುವ ರೈತರಿಗೆ ಸಚಿವರು ಶೀಘ್ರವಾಗಿ ಭೂ ಮಂಜೂರಿ ಮಾಡಿಕೊಡುವ ವಾಗ್ದಾನ ನೀಡಿದರು. ರಾಜ್ಯದ ಪಂಚ ಯೋಜನೆಗಳ ಲಾಭಾಂಶದ ಜತೆಗೆ ತಾಲೂಕಿನಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಉದ್ಯಮ ತರುವ ಕುರಿತು ಉನ್ನತ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಸಿಗುತ್ತಿಲ್ಲ, ಮಹಿಳೆಯರಿಗೆ ಬಹಳ ಕಷ್ಟವಾಗುತ್ತಿದೆ ಎಂಬ ಸಮಸ್ಯೆಗೆ ಉತ್ತರಿಸಿದ ಸಚಿವರು, ಸಮಸ್ಯೆಯ ಶೀಘ್ರ ಪರಿಹಾರಕ್ಕಾಗಿ ಸಿಡಿಪಿಒ ಅವರನ್ನು ತರಾಟೆ ತೆಗೆದುಕೊಂಡರು. ಬೇಲೇಕೇರಿ ಸ್ಮಶಾನಕ್ಕಾಗಿ ಹಕ್ಕುಪತ್ರ ನೀಡಿ ಸ್ಥಳ ಕಾಯ್ದಿರಿಸಿ ಹಾಗೂ ಆ ಪ್ರದೇಶದಲ್ಲಿ ಬೇರೆ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೆರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ರಸ್ತೆ ಹೊಂದಿರದ ಎಲ್ಲ ವಠಾರಗಳಿಗೂ ಸಹ ಸರ್ಕಾರಿ ಅಧಿಸೂಚನೆಗಳ ಪ್ರಕಾರ ರಸ್ತೆ ಸಂಪರ್ಕ ನೀಡುವುದಾಗಿ ತಿಳಿಸಿದರು. ನಿಮ್ಮ ಸೇವೆಗೆ ನಾನು ಎಂದು ಬದ್ಧನಿದ್ದೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಸೈಲ್, ಸರ್ಕಾರಿ ಯೋಜನೆಗಳ ಫಲಾನುಭವಿಳಿಗೆ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು. ಸಮಾಜದ ಕಟ್ಟಕಡೆಯ ನಾಗರಿಕನಿಗೂ ಯೋಜನೆಯ ಉಪಯೋಗ ಸಿಗುವಂತೆ ಶ್ರಮಿಸುವುದಾಗಿ ತಿಳಿಸಿದ ಅವರು, ಅರ್ಧಕ್ಕೆ ನಿಂತಿರುವ ಎಲ್ಲ ರಸ್ತೆಗಳ ಕಾಮಗಾರಿ ಪುನರಾರಂಭ ಮಾಡುವುದಾಗಿ ತಿಳಿಸಿದರು. ಈ ವೇಳೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಭಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ಶಿವಾ ನಾಯಕ, ಐಎಫ್‌ಎಸ್ ಅಧಿಕಾರಿ ಅಭಿಷೇಕ ವಿ, ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಮನೆ ನಿರ್ಮಾಣ ಅರಂಭಕ್ಕೆ ಫಲಾನುಭವಿ ಮಹಿಳೆಯರಿಗೆ ಕಾಮಗಾರಿ ಆದೇಶ ಪತ್ರ ನೀಡಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.