ಸಾರಾಂಶ
ಸಮಾಜ ವಿಜ್ಞಾನ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ
ಕನ್ನಡಪ್ರಭ ವಾರ್ತೆ ಕೊಪ್ಪಳಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠ. ಶಿಕ್ಷಕರು ವೃತ್ತಿಗೆ ಜೀವ ತುಂಬುವ ಕೆಲಸ ಮಾಡಬೇಕು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಸಹಯೋಗದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಜರುಗಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮಾಜ ವಿಜ್ಞಾನ ಜ್ಞಾನ ಮತ್ತು ಮಾಹಿತಿಯ ಭವ್ಯ ಭಂಡಾರ. ಕಲೆ, ತತ್ವಶಾಸ್ತ್ರ, ಭಾಷೆ, ಆರ್ಥಿಕ ಅಭಿವೃದ್ಧಿ, ಸಾಹಿತ್ಯ, ರಾಜಕೀಯ ಮೊದಲಾದ ವಿಷಯಗಳನ್ನೊಳಗೊಂಡಿದ್ದು, ಸಾಮಾಜಿಕ ಜೀವನಕ್ಕೆ ಅಗತ್ಯವಾದ ನಿರ್ದೇಶನ ನೀಡಲಿದೆ. ಶಿಕ್ಷಕರು ಕಲಿಸುವ ಪಾಠ ಮಕ್ಕಳ ಬದುಕಿಗೆ ಹೊಸ ಚೈತನ್ಯ ನೀಡಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಅರಿತುಕೊಂಡು ಬೋಧನೆ ಕಾರ್ಯ ಮಾಡಬೇಕು ಎಂದರು.ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದಿಂದ ಶೈಕ್ಷಣಿಕ ಗುಣಮಟ್ಟ ಚಿಂತೆಗೀಡಾಗುವಂತೆ ಮಾಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಅನುತ್ತೀರ್ಣರಾಗದಂತೆ ನೋಡಿಕೊಳ್ಳಿ. ಮಕ್ಕಳಿಗೆ ಸರ್ಟಿಫಿಕೇಟ್‌ಗೋಸ್ಕರ ಬೋಧನೆ ಮಾಡದೆ ಅವರನ್ನು ಶಿಕ್ಷಿತರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮಲ್ಲಿನ ಒತ್ತಡ ಮತ್ತು ನ್ಯೂನತೆ ಬದಿಗೊತ್ತಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವರುಣ್ ಕುಮಾರ್ ನಿಟ್ಟಾಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಕೇವಲ ಪಠ್ಯಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅಧ್ಯಯನದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೋಧನೆ ಮಾಡಿದಾಗ ಶಿಕ್ಷಣದಲ್ಲಿ ಪ್ರಗತಿ ಹೊಂದಲು ಸಾಧ್ಯ. ಶಿಕ್ಷಕರು ನಿರಂತರ ಅಧ್ಯಯನಶೀಲರಾದಾಗ ಮಾತ್ರ ಶಿಕ್ಷಣದ ಗುಣಮಟ್ಟ ಹೆಚ್ಚಲಿದೆ ಎಂದರು.ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಮಹಾಂತೇಶ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದಯ್ಯ ಎಂ.ಕೆ., ಸಂಪನ್ಮೂಲ ವ್ಯಕ್ತಿ ಸಂತೋಷಕುಮಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸೋಮರೆಡ್ಡಿ ಡಂಬ್ರಳ್ಳಿ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮನೋಹರ ವೇದಪಾಠಕ, ಶಿಕ್ಷಕರಾದ ಪ್ರಕಾಶರಡ್ಡಿ, ವೀರೇಶ, ಗಂಗಾಧರ ಪತ್ತಾರ ಸೇರಿದಂತೆ ತಾಲೂಕಿನ ವಿವಿಧ ಪ್ರೌಢಶಾಲಾ ಶಾಲೆ ಶಿಕ್ಷಕರು ಪಾಲ್ಗೊಂಡಿದ್ದರು.