ವೈದ್ಯ ವೃತ್ತಿಗೆ ಗೌರವ ತರುವ ಕೆಲಸ ಮಾಡಿ: ಪಾಟೀಲ

| Published : Sep 15 2024, 01:56 AM IST

ಸಾರಾಂಶ

ರಾತ್ರಿ ಹೊತ್ತು ಅಪಘಾತಕ್ಕೆ ಸಿಲುಕಿದ ಗಾಯಾಳುಗಳು ಬರುವುದು ಸಹಜ ಹೀಗಾಗಿ ರೋಗಿಗಳ ಸೇವೆಯನ್ನು ಪ್ರಮಾಣಿಕತೆಯಿಂದ ಮಾಡಬೇಕು

ನರಗುಂದ: ವೈದ್ಯ ಸಿಬ್ಬಂದಿಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಬೇಕು. ವೈದ್ಯ ವೃತ್ತಿ ಪವಿತ್ರವಾಗಿದ್ದು, ಅದಕ್ಕೆ ಗೌರವ ತರುವ ಕೆಲಸ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಬಾಬಾ ಸಾಹೇಬ್‌ ಭಾವೆ ಸರ್ಕಾರಿ ತಾಲೂಕಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಘಟಕ, ಪ್ರಯೋಗ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಡಯಾಲಿಸಿಸ್ ಘಟಕ, ಎಕ್ಸರೇ ವಿಭಾಗ, ಐಸಿಯು ಘಟಕ,ನೇತ್ರ ತಜ್ಞರು, ಕಿವಿ, ಎಲಬು ಕೀಲು ತಜ್ಞರು, ಅರವಳಿಕೆ ತಜ್ಞರು ಇದ್ದು. ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಕಾಳಜಿ ಪೂರ್ವಕ ಸೇವೆ ಮಾಡಬೇಕು. ವೈದ್ಯರನ್ನೇ ದೇವರೆಂದು ನಂಬಿ ರೋಗಿಗಳು ನಿಮ್ಮ ಹತ್ತಿರ ಬಂದಿರುತ್ತಾರೆ. ರಾತ್ರಿ ಹೊತ್ತು ಅಪಘಾತಕ್ಕೆ ಸಿಲುಕಿದ ಗಾಯಾಳುಗಳು ಬರುವುದು ಸಹಜ ಹೀಗಾಗಿ ರೋಗಿಗಳ ಸೇವೆಯನ್ನು ಪ್ರಮಾಣಿಕತೆಯಿಂದ ಮಾಡಬೇಕು ಎಂದರು. ವೈದ್ಯರು ಡ್ಯೂಟಿ ಸಮಯದಲ್ಲಿ ಬೇರೆಡೆ ಹೋಗದೆ ಕಾರ್ಯ ಮಾಡಬೇಕು. ಡಿ ಗ್ರುಪ್‌ ನೌಕರರ ದುರ್ವತನೆ ಕಂಡು ಬರುತ್ತಿದ್ದು, ದುರ್ವತನೆ ಮುಂದುವರೆದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ನಾನು ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಬಾಲ ಸಂಜೀವಿನಿ ಯೋಜನೆ ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಂಡ ಅನೇಕರು ಇಂದು ಆರೋಗ್ಯವಾಗಿದ್ದಾರೆ. ಅದರ ಪುಣ್ಯದ ಫಲದಿಂದಲೇ ನಾನು ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಬಂದಿದ್ದೇನೆ. ವೈದ್ಯರು ದೇವರಿದ್ದಂತೆ, ಪವಿತ್ರ ಕಾರ್ಯ ಸರಿಯಾಗಿ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿನ ಐಸಿಯು ಘಟಕ, ಕುಡಿಯುವ ನೀರು, ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಡಾ.ವೈ.ಕೆ. ಭಜಂತ್ರಿ, ತಾಲೂಕು ವೈದ್ಯಾಧಿಕಾರಿ ಡಾ.ರೇಣುಕಾ ಕೊರವನವರ, ಶಿವಾನಂದ ಮುತ್ತವಾಡ, ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಟಿ ಎಸ್, ಡಾ.ನಿರ್ಮಲಾ ಹಂಜಿ, ಡಾ. ವರುಣ ಸವದಿ, ಪ್ರಶಾಂತ ಕುಲಕರ್ಣಿ, ಸಂತೋಷ ಡೊಂಬರ, ಭಾರತಿ ಪಾಟೀಲ, ನಾಗರಾಜ ಗಾಣಿಗೇರ, ಕಿರಣ ಜೋಶಿ, ಶಂಕರ ಯಂಡಿಗೇರಿ, ಶಕೀಲ ಗಣಿ ಸೇರಿದಂತೆ ಮುಂತಾದವರು ಇದ್ದರು.