ಜನರಿಂದ ಹಣ ಪಡೆಯದೇ ಕೆಲಸ ಮಾಡಿ ಕೊಡಿ

| Published : Mar 07 2025, 12:45 AM IST

ಸಾರಾಂಶ

ಫಾರ್ಮ್‌ ನಂ.3 ಸೇರಿದಂತೆ ಇತರೆ ಕೆಲಸಕ್ಕೆ ಸಾರ್ವಜನಿಕರಿಂದ ₹ ೨೦೦೦ ಪಡೆಯುವ ಮಾಹಿತಿ ಕೇಳಿಬಂದಿದೆ. ಇದನ್ನು ಯಾರು ಮಾಡಬಾರದು. ಪಟ್ಟಣ ಪಂಚಾಯಿತಿಯಿಂದ ₹ 4 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಡೆಯುತ್ತಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ರೈತ ಸಂಘದಿಂದ ಈ ಕುರಿತು ದೂರು ಬಂದಿದೆ.

ಕುಕನೂರು:

ಪಟ್ಟಣ ಪಂಚಾಯಿತಿಗೆ ಕೆಲಸಕ್ಕೆಂದು ಬರುವ ಸಾರ್ವಜನಿಕರಿಂದ ಹಣ ತೆಗೆದುಕೊಳ್ಳದೆ ಕೆಲಸ ಮಾಡಿಕೋಡಬೇಕೆಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಸದಸ್ಯ ಸಿರಾಜ್ ಕರಮುಡಿ ಸಭೆಯಲ್ಲಿದ್ದ ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರಿಗಳು, ಸಿಬ್ಬಂದಿಗೆ ಬೇಡಿಕೊಂಡರು.ಗುರುವಾರ ನಡೆದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಫಾರ್ಮ್‌ ನಂ.3 ಸೇರಿದಂತೆ ಇತರೆ ಕೆಲಸಕ್ಕೆ ಸಾರ್ವಜನಿಕರಿಂದ ₹ ೨೦೦೦ ಪಡೆಯುವ ಮಾಹಿತಿ ಕೇಳಿಬಂದಿದೆ. ಇದನ್ನು ಯಾರು ಮಾಡಬಾರದು. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ನಮಗೆ ಕಚೇರಿಯಿಂದ ಠರಾವು ಪ್ರತಿಗಳು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳಪೆ ಕಾಮಗಾರಿ ಆರೋಪ:

ಪಟ್ಟಣ ಪಂಚಾಯಿತಿಯಿಂದ ₹ 4 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಡೆಯುತ್ತಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ರೈತ ಸಂಘದಿಂದ ಈ ಕುರಿತು ದೂರು ಬಂದಿದೆ. ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸದಸ್ಯರಾದವರಿಗೆ ನಮಗೆ ಮರ್ಯಾದೆ ನೀಡುತ್ತಿಲ್ಲ. ಕಾಮಗಾರಿಗೆ ನಿತ್ಯ ನೀರು ಹಾಕುವಂತೆ ಹೇಳಿ. ಇಲ್ಲದಿದ್ದರೆ ದಿನಕ್ಕೊಬ್ಬರಂತೆ ಸದಸ್ಯರೇ ಹೋಗಿ ಹಾಕುತ್ತೇವೆ ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಸುಖಮುನಿ ಎಂ. ನಾಯಕ ಮಾತನಾಡಿ, ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆ ಅನುದಾನದಡಿ ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು ಪಟ್ಟಣದಲ್ಲಿ ೫ ಲಕ್ಷ ಲೀಟರ್ ಸಾಮರ್ಥ್ಯದ ಮೂರು ಮೇಲ್ಮಟ್ಟ ಜಲಸಂಗ್ರಹಗಾರ ನಿರ್ಮಿಸಲಾಗುತ್ತಿದೆ. ಸಂಗಮೇಶ್ವರ ನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದು ಇದನ್ನು ಎಲ್ಲ ಸದಸ್ಯರು ಸೇರಿ ಸಮಸ್ಯೆ ಬಗೆಹರಿಸಬೇಕೆಂದರು.

ಸಭೆಯಲ್ಲಿ ಜೆಸಿಬಿಯಿಂದ ಅಂತ್ಯ ಸಂಸ್ಕಾರದ ಗುಂಡಿ ತೆಗೆಯಲು ₹ 1000, ಶವಗಾರ ವಾಹನಕ್ಕೆ ₹ ೧೦೦೦ ಬಾಡಿಗೆ ನಿಗದಿ ಮಾಡಲಾಯಿತು. ಹಿಂದೂ ಲಿಂಗಾಯತ ರುದ್ರಭೂಮಿ ಅಭಿವೃದ್ಧಿಪಡಿಸುವ ಕುರಿತು, ಗದಗ ರಸ್ತೆಯ ಹೈಟೆಕ್ ಶೌಚಾಲಯ ಅಭಿವೃದ್ಧಿ, ಎಸ್‌ಬಿಎಂ ೨.೦ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗೆ ನಗರ ಸ್ಥಳೀಯ ಸಂಸ್ಥೆಯ ವಂತಿಕೆ ಹಣ ಬಿಡುಗಡೆ, ವಾರ್ಡ್‌ಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ವಹಣೆಗೆ ಮಾನವ ಸಂಪನ್ಮೂಲ ವ್ಯಕ್ತಿಯನ್ನು ಟೆಂಡರ್ ಮೂಲಕ ತೆಗೆದುಕೊಳ್ಳುವುದು, ಬಿದಿ ನಾಯಿಗಳಿಗೆ ಸಂತಾನ ನಿಯಂತ್ರಣ ಚಿಕಿತ್ಸೆ ಕೊಡಿಸುವುದು, ಕಾರ್ಮಿಕರ ಭವಿಷ್ಯ ನಿಧಿ ಕಡಿತ ಮಾಡಿರುವ ಕುರಿತು ಚರ್ಚಿಸಲಾಯಿತು.

ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿ, ಸಮಸ್ಯೆಗಳು ಇರುವ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಹರಿಸಲಾಗುವುದು. ಪಟ್ಟಣದಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆದಾರರ ಸಭೆಯನ್ನು ಸದಸ್ಯರ ಸಮ್ಮುಖದಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದಿನ್‌ಸಾಬ್ ಗುಡಿಹಿಂದಿಲ್, ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಗಗನ್ ನೋಟಗಾರ, ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಬಾಲರಾಜ ಗಾಳಿ, ಲಕ್ಷ್ಮೀ ಸಬರದ, ಶಿವರಾಜಗೌಡ ಯಲ್ಲಪ್ಪಗೌಡರ, ನೇತ್ರಾವತಿ ಮಾಲಗಿತ್ತಿ, ರಾಧಾ ದೊಡ್ಡಮನಿ, ಮಂಜುಳಾ ಕಲ್ಮನಿ, ಕವಿತಾ ಹೂಗಾರ, ಮಂಜುನಾಥ ಕೊಳೂರು, ಮಲ್ಲಿಕಾರ್ಜುನ ಚೌದ್ರಿ, ಜಗನ್ನಾಥ ಭೋವಿ, ನಾಮನಿದೇರ್ಶನ ಸದಸ್ಯರಾದ ಶರಣಯ್ಯ ಶಶಿಮಠ, ಈರಣ್ಣ ಯಲಬುರ್ಗಿ ಹಾಗೂ ಸಿಬ್ಬಂದಿ ಇದ್ದರು.