ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ರಾಜ್ಯದಲ್ಲಿಯ ಬಿಜೆಪಿ ೨೮ ಸಂಸದರ ಇದ್ದರೂ ರಾಜ್ಯದ ಅಭಿವೃದ್ಧಿಯ ವಿಷಯವಾಗಿ ಒಂದೂ ಚಕಾರ ಎತ್ತುವುದಿಲ್ಲ. ಎಲ್ಲರೂ ಮೋದಿಯ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ಇಂತಹ ಸಂಸದರು ನಮಗೆ ಬೇಕಾ? ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.ಬುಧವಾರ ಪಟ್ಟಣದ ಶ್ರೀಸಂಗಮೇಶ್ವರ ಸಭಾಭವನದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಮತಯಾಚನೆ ಹಾಗೂ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದ ರೆಡ್ಡಿ ಕುಲ ಬಾಂಧವರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಕೇವಲ ಹಿಂದೂ-ಮುಸ್ಲಿಂ ಭಾವನೆ ಕೆರಳಿಸುವುದರೊಂದಿಗೆ ಕುರ್ಚಿಗೆ ಅಂಟಿಕೊಳ್ಳುತ್ತಾ ಬಂದಿರುವ ಇವರ ಆಟ ಈ ಬಾರಿ ನಡೆಯುವುದಿಲ್ಲ. ಇವರು ಮಾಡುತ್ತಿರುವುದೆಲ್ಲಾ ಜನರಿಗೆ ಗೊತ್ತಾಗಿದೆ ಎಂದರು.
ನಮ್ಮ ರಾಜ್ಯದಿಂದ ಪ್ರತಿವರ್ಷವೂ ₹೪ ಲಕ್ಷ ೩೪ ಸಾವಿರ ಕೋಟಿ ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ಕಟ್ಟುತ್ತಿದ್ದೇವೆ. ಆದರೆ ಪ್ರಧಾನಿ ಕೆಟ್ಟ ಬರಗಾಲದ ಸಮಯದಲ್ಲಿ ₹೩ ಸಾವಿರ ೮೦೦ ಕೋಟಿ ಬರಗಾಲ ಪರಿಹಾರ ನಿಧಿ ಬಿಡುಗಡೆ ಮಾಡಿದ್ದಾರೆ. ನಮ್ಮ ರಾಜ್ಯದ ತೆರಿಗೆ ಪಾಲು ಕೊಡದೇ ನಿಂಗಿದಂತಹ ಪ್ರಧಾನಿಯಿಂದ ದೇಶದ ಅಭಿವೃದ್ದಿ ಕಾಣಲು ಅಸಾಧ್ಯ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಬರಗಾಲ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ನಮ್ಮ ರಾಜ್ಯದ ತೆರಿಗೆ ಪಾಲು ನೀಡಿ ಎಂದು ಹತ್ತು ಸಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡುತ್ತಾ ಬಂದರೂ ಒಂದು ನೈಯಾಪೈಸಾ ಬಿಡುಗಡೆ ಮಾಡಲಿಲ್ಲ. ಕೊನೆಯದಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ನಮ್ಮ ತೆರಿಗೆ ಪಾಲು ಪಡೆಯಬೇಕಾಯಿತು. ಕೇಂದ್ರದಿಂದ ತೆರಿಗೆ ಪಾಲು ಬರದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮ್ಮನೆ ಕೂಡದೇ ಎಲ್ಲ ರೈತರ ಖಾತೆಗಳಿಗೆ ₹೨ ಸಾವಿರ ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ. ರೈತರ ಕಷ್ಟ ಪ್ರಧಾನಿ ಮೋದಿಗೆ ಕಾಣಿಸುತ್ತಿಲ್ಲ. ಕೇವಲ ಅಂಬಾನಿ ಅಂತವರು ಅವರ ಕಣ್ಣಿಗೆ ಕಾಣಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಎಲ್ಲಿ ಇದೆಯೋ ಅಂತಲ್ಲಿ ಬರ ಪರಿಹಾರ ಕೇಳದಿದ್ದರೂ ಕೊಟ್ಟಿದ್ದಾರೆ. ಆದರೆ ಕರ್ನಾಟಕದ ರೈತರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಅಧ್ಯಕ್ಷತೆ ವಹಿಸಿದ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಮಾತನಾಡಿ, ಸುಳ್ಳಿನ ಕಂತೆ ಕಟ್ಟಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅವರ ಕುರ್ಚಿ ಈ ಬಾರಿ ಖಾಲಿಯಾಗಲಿದೆ. ಸದಾ ಕಾಲ ಕೋಮು ಭಾವನೆ ಹುಟ್ಟಿಸುತ್ತಾ ಧರ್ಮ-ಧರ್ಮಗಳ ನಡುವೆ ವಿಷ ಬೀಜ ಭಿತ್ತಿ ಅಧಿಕಾರದ ಲಾಲಸೆಯಲ್ಲಿರುವ ಬಿಜೆಪಿಯವರ ಬಾಯಿಗೆ ಈ ಬಾರಿ ಬೀಗ ಬೀಳಲಿದೆ ಎಂದರು..ಇದೇ ಸಮಯದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಅಸ್ಕಿ ಫೌಂಡೇಶನ್ ವತಿಯಿಂದ ಮತ್ತು ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್, ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆ ಅಲ್ಲದೇ ಇನ್ನಿತರ ಮುಖಂಡರುಗಳು ಸನ್ಮಾನಿಸಿ ಗೌರವಿಸಿದರು.
ವೇದಿಕೆಯ ಮೇಲೆ ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ರಾಯನಗೌಡ ತಾತರಡ್ಡಿ(ನಾಲತವಾಡ), ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ, ಡಾ.ಪ್ರಭುಗೌಡ ಲಿಂಗದಳ್ಳಿ, ಎಸ್.ಎಸ್.ಹುಲ್ಲೂರ, ಶಾಂತಗೌಡ ನಡಹಳ್ಳಿ, ಬಾಪುಗೌಡ ಲಿಂಗದಳ್ಳಿ, ಸುರೇಶ ದೇಸಾಯಿ, ಸುಭಾಸ ಛಾಯಾಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಸಿದ್ದನಗೌಡ ಪಾಟೀಲ(ನಾವದಗಿ), ಸಿಕಂದರ ವಠಾರ, ಗುರುಬಸ್ಸು ಕಂಗಳ, ಪಲ್ಲವಿ ನಾಡಗೌಡ, ಪ್ರಭುಗೌಡ ಮದರಕಲ್ಲ, ವಿಜಯಸಿಂಗ್ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ನೀಲಮ್ಮ ಪಾಟೀಲ, ಜಿ.ಜಿ.ಅಸ್ಕಿ ಮೊದಲಾದವರು ಇದ್ದರು.