ರಾಮನಗರ: ದೋಬಿಘಾಟ್, ಸಮುದಾಯ ಭವನಕ್ಕೆ ಪ್ರಯತ್ನಿಸುವೆ - ಶಾಸಕ ಇಕ್ಬಾಲ್ ಹುಸೇನ್ ಭರವಸೆ

| N/A | Published : Feb 03 2025, 12:34 AM IST / Updated: Feb 03 2025, 11:43 AM IST

ರಾಮನಗರ: ದೋಬಿಘಾಟ್, ಸಮುದಾಯ ಭವನಕ್ಕೆ ಪ್ರಯತ್ನಿಸುವೆ - ಶಾಸಕ ಇಕ್ಬಾಲ್ ಹುಸೇನ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಮಡಿವಾಳರ ಕಾಯಕ ಅತ್ಯಂತ ಶ್ರೇಷ್ಠವಾದದ್ದು. ಈ ವೃತ್ತಿಗೆ ಬೆಲೆ ಕಟ್ಟಲು ಸಾಧ್ಯವಾಗದು. ನಿಮ್ಮ ಸಮುದಾಯಕ್ಕೆ ದೋಬಿಘಾಟ್ ಹಾಗೂ ಸಮುದಾಯ ಭವನ ನಿರ್ಮಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ರಾಮನಗರ: ಸಮಾಜದಲ್ಲಿ ಮಡಿವಾಳರ ಕಾಯಕ ಅತ್ಯಂತ ಶ್ರೇಷ್ಠವಾದದ್ದು. ಈ ವೃತ್ತಿಗೆ ಬೆಲೆ ಕಟ್ಟಲು ಸಾಧ್ಯವಾಗದು. ನಿಮ್ಮ ಸಮುದಾಯಕ್ಕೆ ದೋಬಿಘಾಟ್ ಹಾಗೂ ಸಮುದಾಯ ಭವನ ನಿರ್ಮಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿವಾಳ ಮಾಚಿದೇವರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಕಾಲದಿಂದಲೂ ಮಡಿವಾಳ ಸಮುದಾಯಕ್ಕೆ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಶಾಸಕನಾದ ಮೇಲೆ ಸಮುದಾಯದ ಜನರನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಸವಲತ್ತುಗಳನ್ನು ಕಲ್ಪಿಸಿದ್ದೇವೆ. ಇದೀಗ ಸೂರಿಲ್ಲದವರಿಗೆ ನಿವೇಶನ ನೀಡಲು ಪನ್ಯತ್ನಿಸುತ್ತೇನೆ ಎಂದರು.

ಮಡಿವಾಳ ಸಮುದಾಯ ತನ್ನ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗೂ ಸಮಾಜದಲ್ಲಿ ಸಮಾನವಾಗಿ ಗುರುತಿಸಿಕೊಂಡು ಏಳಿಗೆ ಹೊಂದಲು ಸಂಘಟನೆ ಮುಖ್ಯ. ಸಮುದಾಯವು ಸಂಘಟಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಆದರೆ, ಮಡಿವಾಳ ಸಮುದಾಯದ ಸಂಘಟನೆಯಲ್ಲಿ ಒಡಕು ಮೂಡಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಮುದಾಯವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವವರೆ ಒಡಕು ಮೂಡಿಸಿದರೆ ಆ ಜನರ ಪಾಡೇನಾಗಬೇಕು. ಆದ್ದರಿಂದ ಸಮುದಾಯದ ಪ್ರಮುಖರು ಮನಸ್ತಾಪಗಳನ್ನು ದೂರ ಮಾಡಿ ಒಗ್ಗಟ್ಟಿನಿಂದ ಸಮುದಾಯವನ್ನು ಮುನ್ನಡೆಸಬೇಕು. ಒಗ್ಗಟ್ಟಿದ್ದರೆ ಮಾತ್ರ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ಕಲ್ಯಾಣ ಕರ್ನಾಟಕವನ್ನು ಕೇಂದ್ರವಾಗಿಸಿಕೊಂಡು 12ನೇ ಶತಮಾನದಲ್ಲಿ ನಡೆದ ಬಸವಣ್ಣನವರ ನೇತೃತ್ವದ ವೈಚಾರಿಕ ಹಾಗೂ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರ ಪಾತ್ರ ಅತ್ಯಂತ ಹಿರಿದಾಗಿದೆ. ಅವರು ಶರಣ ಸಂಸ್ಕೃತಿಯ ಗಣಾಚಾರ ತತ್ವದ ಪ್ರತಿನಿಧಿಯಾಗಿದ್ದರು. ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ಸುಟ್ಟು ಹಾಕುವ ಕೆಲಸ ನಡೆಯಿತು. ಆಗ ದಿಟ್ಟತನದಿಂದ ಹೋರಾಡಿ ವಚನಗಳ ಸಂರಕ್ಷಣೆ ಮಾಡಿದರು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಎಚ್.ರವಿಕುಮಾರ್ ಮಾತನಾಡಿ, ಮಡಿವಾಳ ಮಾಚಿದೇವರು ಅತೀ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಲಿಂಗಾಯಿತರು ಹೆಚ್ಚಾಗಿ ಅವರನ್ನೇ ನೆನೆಯುತ್ತಾರೆ. ಬಸವಣ್ಣ ಅವರಷ್ಟೇ ಗೌರವ ಮಾಚಿದೇವರಿಗೂ ಸಿಗುತ್ತದೆ ಎಂದು ಹೇಳಿದರು.

ಇಲ್ಲಿಯವರೆಗೆ ಸಮಾಜದ ನಾಯಕರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಅದರಲ್ಲೂ ಹಿಂದುಳಿದ ವರ್ಗಗಳ ಬಗ್ಗೆ ಕರುಣೆ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಬಗ್ಗೆ ಚಿಂತನೆ ಮಾಡಿ ಕೆಲ ನಾಯಕರು ಹಾಗೂ ಸಮುದಾಯದ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನ ಮತ್ತು ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ದೇಶದ 21 ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ರಾಜ್ಯದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು. ಸಮುದಾಯದಲ್ಲಿ ಒಡಕನ್ನು ಪ್ರದರ್ಶನ ಮಾಡಿದರೆ ನಿಮ್ಮ ಬೆನ್ನಿಗೆ ಯಾರೂ ನಿಲ್ಲಲ್ಲ. ಹಕ್ಕುಗಳ ಪ್ರತಿಪಾದನೆ ಮಾಡಲು ಒಗ್ಗಟ್ಟು ಇರಬೇಕು. ಆದ್ದರಿಂದ ಸಮುದಾಯದ ಎರಡು ಸಂಘಟನೆಗಳು ಭಿನ್ನಮತ ಮರೆತು ಸಮುದಾಯದ ಅಭಿವೃದ್ಧಿಗಾಗಿ ಒಗ್ಗಟ್ಟು ಕಾಯ್ದುಕೊಲ್ಳುವಂತೆ ಎಂದು ರಮಚಂದ್ರಪ್ಪ ತಿಳಿಸಿದರು.

ಸಮಾರಂಭದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಸಾಹಿತಿ ಚೌಡಯ್ಯ, ಜಿಲ್ಲಾಧ್ಯಕ್ಷ ರವಿಕುಮಾರ್, ಮುಖಂಡರಾದ ಭೈರಪ್ಪ, ರವಿ, ಜಿಲ್ಲಾಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.