ನಿವೃತ್ತಿ ಬಗ್ಗೆ ಜಯದೇವ ನಿರ್ದೇಶಕ ಡಾ। ಮಂಜುನಾಥ್‌ ಬೇಸರ

| Published : Jan 25 2024, 02:07 AM IST

ಸಾರಾಂಶ

ಮಾಸಾಂತ್ಯಕ್ಕೆ ನಿವೃತ್ತರಾಗುತ್ತಿರುವ ಖ್ಯಾತ ಹೃದ್ರೋಗ ತಜ್ಞ ಡಾ। ಮಂಜುನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಯದೇವ ಆಸ್ಪತ್ರೆ ಉದ್ಘಾಟಿಸಿ ನಿವೃತ್ತಿ ಆಗಬೇಕೆಂದಿದ್ದೆ. ಆದರೆ ಈಗಲೇ ಹೊಸ ನಿರ್ದೇಶಕರ ನೇಮಕ ಪ್ರಕ್ರಿಯೆ ನಡೆದಿದೆ. ಮುಂದುವರಿಕೆ ಬಗ್ಗೆ ನಾನು ಒತ್ತಡ ಹೇರಿಲ್ಲ, ಲಾಬಿ ಮಾಡಲ್ಲ. ನಿವೃತ್ತಿ ನಂತರ ರಾಜಕೀಯ ಸೇರಲ್ಲ, ವೈದ್ಯ ವೃತ್ತಿಯನ್ನೇ ಮಾಡುವೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಸುವ ಕುರಿತಂತೆ ಸರ್ಕಾರದ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಅಲ್ಲದೆ, ನಿರ್ದೇಶಕ ಸ್ಥಾನಕ್ಕಾಗಿ ಒತ್ತಡ, ಲಾಬಿ ಮಾಡುವ ಅವಶ್ಯಕತೆಯೂ ನನಗಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ. ಮಾಸಾಂತ್ಯಕ್ಕೆ ಅವರು ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ತಮ್ಮನ್ನು ನಿರ್ದೇಶಕ ಸ್ಥಾನದಲ್ಲಿ ಮುಂದುವರಿಸಲು ಆಸಕ್ತಿ ತೋರದ ಹಾಗೂ ಸೂಕ್ತ ರೀತಿಯಲ್ಲಿ ಬೀಳ್ಕೊಡದ ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಂಜುನಾಥ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನನ್ನು ನಿರ್ದೇಶಕ ಸ್ಥಾನದಲ್ಲಿ ಮುಂದುವರಿಸುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅದಕ್ಕಾಗಿ ನಾನು ಯಾರ ಮೇಲೂ ಒತ್ತಡ ಹೇರುವುದಿಲ್ಲ, ಅದು ನನ್ನ ಜಾಯಮಾನವೂ ಅಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ನನ್ನ ಅಭಿಪ್ರಾಯವನ್ನೂ ಕೇಳಿಲ್ಲ’ ಎಂದು ಹೇಳಿದರು.

‘ಸಂಸ್ಥೆಗೆ ಹೊಸ ನಿರ್ದೇಶಕರನ್ನು ನೇಮಕ ಮಾಡುವ ಪ್ರಸ್ತಾವನೆ ಚರ್ಚೆಯಲ್ಲಿದೆ. ಅದಕ್ಕೆ ಪೂರಕ ಎಂಬಂತೆ ರಾಜ್ಯ ಸರ್ಕಾರ ಈಗಾಗಲೆ ಹೊಸ ನಿರ್ದೇಶಕರನ್ನು ನಿಯೋಜಿಸಲು ನಿರ್ಧರಿಸಿದೆ. ಇನ್ನೊಂದು ವಾರದಲ್ಲಿ ಹೊಸ ನಿರ್ದೇಶಕರು ಬರುವ ನಿರೀಕ್ಷೆಯಿದೆ. ಆದರೆ, ಯಾರನ್ನು ನೇಮಿಸಲಾಗುತ್ತದೆ ಎಂಬುದು ನನಗೆ ತಿಳಿದಿಲ್ಲ’ ಎಂದರು.

‘ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಜನರ ಸೇವೆಗೆ ನೀಡಿದ ನಂತರ ನಿವೃತ್ತನಾಗಬೇಕು ಎಂದುಕೊಂಡಿದ್ದೆ. ಅದಕ್ಕೂ ಮೊದಲೇ ನಿವೃತ್ತನಾಗುತ್ತಿದ್ದೇನೆ. ಅಲ್ಲಿನ ಆಸ್ಪತ್ರೆ ಶೇ. 85ರಷ್ಟು ಪೂರ್ಣಗೊಂಡಿದ್ದು, ಏಪ್ರಿಲ್‌ನಲ್ಲಿ ಜನರ ಸೇವೆಗೆ ಲಭ್ಯವಾಗುವ ಸಾಧ್ಯತೆಗಳಿವೆ’ ಎಂದರು.

ರಾಜಕೀಯ ಸೇರಲ್ಲ:

‘ನಿವೃತ್ತಿ ನಂತರವೂ ನಾನು ವೃತ್ತಿ ಮುಂದುವರಿಸುವ ಆಸೆಯಲ್ಲಿದ್ದೇನೆ. ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ ಎಂಬುದೆಲ್ಲ ಸತ್ಯಕ್ಕೆ ದೂರವಾದದ್ದು. ಅದೆಲ್ಲವೂ ಗಾಳಿ ಸುದ್ದಿ. ಜನರ ಸೇವೆ ಮಾಡುವುದನ್ನು ಮುಂದುವರಿಸುವುದು ನನ್ನ ಮುಂದಿನ ಗುರಿ’ ಎಂದು ತಿಳಿಸಿದರು.