ವೈದ್ಯ ಡಾ.ಸುನಿಲಕುಮಾರ್ ಕಿಡ್ನಾಪ್ ಕೇಸ್‌ : 7 ಆರೋಪಿಗಳ ಬಂಧನ - ಓರ್ವನ ಕಾಲಿಗೆ ಫೈರಿಂಗ್

| N/A | Published : Jan 30 2025, 12:32 AM IST / Updated: Jan 30 2025, 02:00 PM IST

ವೈದ್ಯ ಡಾ.ಸುನಿಲಕುಮಾರ್ ಕಿಡ್ನಾಪ್ ಕೇಸ್‌ : 7 ಆರೋಪಿಗಳ ಬಂಧನ - ಓರ್ವನ ಕಾಲಿಗೆ ಫೈರಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯ ಡಾ.ಸುನಿಲಕುಮಾರ್ ಅಪಹರಣ ಪ್ರಕರಣದ 7 ಆರೋಪಿಗಳನ್ನು ಬುಧವಾರ ಬೆಳಿಗ್ಗೆ ನಗರದ ಗಾಂಧಿನಗರ ಠಾಣೆ ವ್ಯಾಪ್ತಿ ಎಸ್.ಎನ್.ಪೇಟೆ ಹಾಗೂ ಬಸವೇಶ್ವರ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯ ಡಾ.ಸುನಿಲಕುಮಾರ್ ಅಪಹರಣ ಪ್ರಕರಣದ 7 ಆರೋಪಿಗಳನ್ನು ಬುಧವಾರ ಬೆಳಿಗ್ಗೆ ನಗರದ ಗಾಂಧಿನಗರ ಠಾಣೆ ವ್ಯಾಪ್ತಿ ಎಸ್.ಎನ್.ಪೇಟೆ ಹಾಗೂ ಬಸವೇಶ್ವರ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸ್ ಪೇದೆ ಕಾಳಿಂಗಪ್ಪ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಶ್ರೀಕಾಂತ್ ಎಂಬಾತನ ಕಾಲಿಗೆ ಬ್ರೂಸ್‌ಪೇಟೆ ಸಿಪಿಐ ಎಂ.ಎನ್.ಸಿಂಧೂರ್ ಫೈರಿಂಗ್ ಮಾಡಿದ್ದಾರೆ.ಗುಂಡೇಟು ತಿಂದ ಆರೋಪಿ ಹಾಗೂ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಕಾಳಿಂಗಪ್ಪ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯ ಡಾ.ಸುನಿಲಕುಮಾರ್ ಅವರನ್ನು ಅಪಹರಣ ಮಾಡಿ ಬಳ್ಳಾರಿ ಹೊರವಲಯದ ಚಾಗನೂರು-ಸಿರವಾರ ಬಳಿಯ ಗೋದಾಮಿನಲ್ಲಿ ಇರಿಸಲಾಗಿತ್ತು. ಈ ಸ್ಥಳದಲ್ಲಿ ಮಹಜರು ಮಾಡಲು ಆರೋಪಿಗಳನ್ನು ಕರೆದುಕೊಂಡು ಹೋಗಲಾಗಿದ್ದು, ಇದೇ ವೇಳೆ ಆರೋಪಿ ಶ್ರೀಕಾಂತ್, ಪೊಲೀಸ್ ಪೇದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ ಬಸವೇಶ್ವರ ನಗರದ ನಿವಾಸಿ ಎಸ್.ಶ್ರೀಕಾಂತ್ (44), ಪಟೇಲ್‌ನಗರದ ವೈ.ಭೋಜರಾಜ (25), ಅನಂತಪುರ ರಸ್ತೆಯ ಖಾಸಗಿ ಆಸ್ಪತ್ರೆ ಹಿಂಭಾಗದ ಎಸ್.ಸಾಯಿ (21), ಆಟೋನಗರ ನಿವಾಸಿ ಕೆ.ತರುಣ್ ಕುಮಾರ್ (22), ಸತ್ಯನಾರಾಯಣಪೇಟೆಯ ಉಮೇಶ್ ಯಾದವ್ (25), ಹರಿಪ್ರಿಯ ಬಡಾವಣೆಯ ಕೆ.ಪುರುಷೋತ್ತಮ (37), ಹೊಸಪೇಟೆಯ ಅಮರಾವತಿ ಪ್ರದೇಶದ ಎಸ್.ರಾಕೇಶ್ (44) ಬಂಧಿತರು.

ಕಳೆದ ಜ.25ರಂದು ನಗರದ ಜಿಲ್ಲಾಸ್ಪತ್ರೆಯ ವೈದ್ಯ ಡಾ.ಸುನಿಲಕುಮಾರ್ ಬೆಳಗಿನಜಾವ ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಕಾರ್‌ನಲ್ಲಿ ಅಪಹರಣ ಮಾಡಿದ್ದರಲ್ಲದೆ, ಮೂರು ಕೋಟಿ ನಗದು ಹಾಗೂ ಮೂರು ಕೋಟಿ ರು. ಮೌಲ್ಯದ ಬಂಗಾರದ ಗಟ್ಟಿಯ ಬೇಡಿಕೆ ಇಟ್ಟಿದ್ದರು. ವೈದ್ಯನ ಅಪರಹಣವಾಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ನಗರ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ಅಲರ್ಟ್ ಮಾಡಿಸಿದ್ದರಲ್ಲದೆ, ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಬಾರದು ಹಾಗೂ ವೈದ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಏತನ್ಮಧ್ಯೆ, ಆರೋಪಿಗಳ ಬಂಧನಕ್ಕೆ ಬ್ರೂಸ್‌ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಎನ್.ಸಿಂಧೂರ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಪೊಲೀಸರ ತೀವ್ರ ನಿಗಾದಿಂದ ಎಚ್ಚೆತ್ತ ಆರೋಪಿಗಳು, ವೈದ್ಯ ಡಾ.ಸುನಿಲಕುಮಾರ್ ಅವರನ್ನು ಕುರುಗೋಡು ತಾಲೂಕಿನ ಸೋಮಸಮುದ್ರದ ಬಳಿಯೇ ಬಿಟ್ಟು, ಅಲ್ಲಿಂದ ಪರಾರಿಯಾಗಿದ್ದರು. ಪ್ರಕರಣದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಆರೋಪಿತರು ಬಳಸಿದ ವಾಹನ, ಮೊಬೈಲ್‌ಗಳು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಎಸ್ಪಿ ಡಾ.ಶೋಭಾರಾಣಿ ತಿಳಿಸಿದ್ದಾರೆ.

ಆರೋಪಿಯ ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಪೇದೆ ಕಾಳಿಂಗ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.