ವೈದ್ಯೆ ರೇಪ್‌ ಪ್ರಕರಣ : ಕಾಫಿಯ ನಾಡಿನಲ್ಲಿ ಆಸ್ಪತ್ರೆಗಳು ಬಂದ್‌

| Published : Aug 18 2024, 01:47 AM IST

ವೈದ್ಯೆ ರೇಪ್‌ ಪ್ರಕರಣ : ಕಾಫಿಯ ನಾಡಿನಲ್ಲಿ ಆಸ್ಪತ್ರೆಗಳು ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೋಲ್ಕತಾ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಕಿರಿಯ ವೈದ್ಯೆ ಮೇಲಿನ ಆತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಾಫಿನಾಡಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಶನಿವಾರ ಬಂದ್‌ ಆಗಿದ್ದವು.

ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಬಂದ್‌ । ಬಿಕೋ ಎನ್ನುತ್ತಿದ್ದ ಸರ್ಕಾರಿ ಆಸ್ಪತ್ರೆಗಳು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೋಲ್ಕತಾ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಕಿರಿಯ ವೈದ್ಯೆ ಮೇಲಿನ ಆತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಾಫಿನಾಡಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಶನಿವಾರ ಬಂದ್‌ ಆಗಿದ್ದವು.

ಜಿಲ್ಲಾ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆ ಸೇವೆ ಇರಲಿಲ್ಲ, ತುರ್ತು ಸೇವೆಗಳು ಮಾತ್ರ ಲಭ್ಯವಾಗಿದ್ದವು. ಖಾಸಗಿ ಆಸ್ಪತ್ರೆಗಳಲ್ಲೂ ಇವೇ ಸೇವೆಗಳು ಮಾತ್ರ ಮುಂದುವರಿದಿದ್ದವು. ಹಾಗಾಗಿ ಗ್ರಾಮೀಣ ಭಾಗಗಳಿಂದ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳಿಗೆ ತೊಂದರೆಯಾಗಿತ್ತು.

ಚಿಕ್ಕಮಗಳೂರಿನಲ್ಲಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ (ಐಎಂಎ) ಜಿಲ್ಲಾ ಘಟಕದ ನೇತೃತ್ವದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಗಳ ವೈದ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕಚೇರಿ ಶಿರಸ್ತೇದಾರ್‌ ಹೇಮಂತ್‌ ಅವರಿಗೆ ಮನವಿ ಸಲ್ಲಿಸಿ, ಕೋಲ್ಕತ್ತಾದ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯೆಯ ಮೇಲೆ ನಡೆದಿರುವ ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಮಗಳೂರು ಐಎಂಎ ಅಧ್ಯಕ್ಷ ಡಾ. ಚೈತನ್ಯ ಸವೂರ್, ತರಬೇತಿ ವೈದ್ಯೆ ಕರ್ತವ್ಯ ನಿರ್ವಹಿಸುವ ವೇಳೆ ಯಲ್ಲಿ ಯುವಕರ ಗುಂಪು ಸಾಮೂಹಿಕ ಅತ್ಯಾಚಾರವೆಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂಥ ಕೃತ್ಯವೆಸಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಿಂದ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರು ತೀವ್ರ ಆತಂಕಕ್ಕೆ ಒಳಗಾಗಿ ರಕ್ಷಣೆ ಇಲ್ಲದೇ ಕರ್ತವ್ಯ ನಿರ್ವಹಿಸುವುದು ಹೇಗೆಂದು ಗಾಬರಿಗೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸಬೇಕು. ಕಾನೂನು ಸುವ್ಯವಸ್ಥೆ ಗಟ್ಟಿ ಗೊಳಿಸುವ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದರು.ಖಾಸಗೀ ವೈದ್ಯಕೀಯ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಸ್ನಾತಕೋತ್ತರ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ 32ರ ಹರೆಯದ ಮಹಿಳೆ ಸೇವೆ ಬಳಿಕ ವಿರಾಮಕ್ಕೆ ತೆರಳಿದ್ದ ವೇಳೆಯಲ್ಲಿ ದಿಢೀರನೇ ಬಂದ ವಿಕೃತ ಮನಸ್ಸಿನ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ನಡೆಸಿರುವುದು ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದರು.ಇತ್ತೀಚೆಗೆ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣಕ್ಕಿಂತ ಪಶ್ಚಿಮ ಬಂಗಾಳದ ಪ್ರಕರಣ ಭೀಕರವಾಗಿದೆ. ಇದರಿಂದ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ. ಈ ಬಗ್ಗೆ ವೈದ್ಯ ವೃತ್ತಿಯಲ್ಲಿರುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದೇ ಕೂಡಲೇ ಬಂಧಿಸಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ವೈದ್ಯರ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವವರೆಗೂ ಐಎಂಎ ಹೋರಾಟ ಮುಂದುವರೆದು ನೊಂದ ಕುಟುಂಬಕ್ಕೆ ಬೆಂಬಲವಾಗಲಿದೆ ಎಂದರು.ಡಾ. ಜ್ಯೋತಿ ಕೃಷ್ಣ ಮಾತನಾಡಿ, ವೈದ್ಯ ವೃತ್ತಿಯಲ್ಲಿ ತುರ್ತು ಸಂದರ್ಭ ಎದುರಾದರೆ ಮಹಿಳೆಯರು ಕೂಡಾ ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಆದರೆ ಇಂಥ ಹೀನಾ ಕೃತ್ಯದಿಂದ ಮಹಿಳಾ ವೈದ್ಯ ರು ಹಾಗೂ ಸಿಬ್ಬಂದಿ ತಡರಾತ್ರಿವರೆಗೆ ಕರ್ತವ್ಯ ನಿರ್ವಹಿಸುವುದೇ ದೊಡ್ಡ ಆತಂಕವಾಗಿದೆ ಎಂದರು.ಹಗಲು ಅಥವಾ ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿ ಮೇಲೆ ಕೆಲವೊಮ್ಮೆ ಏಕಾಏಕಿ ಹಲ್ಲೆಗೆ ಮುಂದಾಗುವ ಸಂಭವ ವಿರುತ್ತದೆ. ಈ ಬಗ್ಗೆ ಸರ್ಕಾರಗಳು ಭದ್ರತೆ ಒದಗಿಸುವುದು ಅತಿ ಮುಖ್ಯ. ಅದರಲ್ಲೂ ಮಹಿಳಾ ಸಿಬ್ಬಂದಿಗೆ ಭದ್ರತೆ ಕೊಡುವುದು ಸರ್ಕಾರದ ಮೂಲ ಕರ್ತವ್ಯವಾಗಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವಥ್‌ಬಾಬು, ಸರ್ಜನ್ ಡಾಯ ಮೋಹನ್‌ಕುಮಾರ್, ವೈದ್ಯರಾದ ಡಾ. ಪ್ಯಾಟ್ರಿಕ್, ಡಾ. ಲೋಹಿತ್, ಡಾ.ಶುಭ ವಿಜಯ್, ಡಾ.ವಿನಯ್, ಡಾ. ಮಂಜುನಾಥ್‌ ಹಾಗೂ ವೈದ್ಯರು ಇದ್ದರು. 17 ಕೆಸಿಕೆಎಂ 5ಕೊಲ್ಕತಾದಲ್ಲಿ ವೈದ್ಯೆ ರೇಪ್‌ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್‌ ಹೇಮಂತ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

--- 17 ಕೆಸಿಕೆಎಂ 6

ಕೊಲ್ಕತಾದಲ್ಲಿ ವೈದ್ಯೆ ರೇಪ್‌ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಶನಿವಾರ ವೈದ್ಯರು ಪ್ರತಿಭಟನೆ ನಡೆಸಿದ್ದರಿಂದ ಬಿಕೋ ಎನ್ನುತ್ತಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ.