ಎರಡು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರ್ಮದಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಕನ್ನಡಪ್ರಭ ವಾರ್ತೆ, ಚಿಂತಾಮಣಿ:

ವೈದ್ಯರ ಎಡವಟ್ಟಿನಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

ತಾಲೂಕಿನ ಬಟ್ಲಹಳ್ಳಿ ಗ್ರಾಮದ ಓಬಳೇಶ್ ಎಂಬುವರ ಪತ್ನಿ ನರ್ಮದಾ (24) ಮೃತಪಟ್ಟ ದುರ್ದೈವಿ. ಎರಡು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರ್ಮದಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಶಸ್ತ್ರಚಿಕಿತ್ಸೆಯಾದ ಜಾಗದಲ್ಲಿ ಅತಿಯಾದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ವೈದ್ಯರ ಬೇಜವಾಬ್ದಾರಿತನದಿಂದಲೇ ನರ್ಮದಾ ಮೃತಪಟ್ಟಿದ್ದಾರೆಂದು ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು, ಮೃತದೇಹವನ್ನು ಆಸ್ಪತ್ರೆಯ ಮುಂದಿಟ್ಟು ತಡರಾತ್ರಿಯಿಡೀ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ವೈದ್ಯರು ಸ್ಥಳಕ್ಕೆ ಬಾರದೆ ಇರುವುದು ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಮೃತರ ಕುಟುಂಬಸ್ಥರು ಎಚ್ಚರಿಸಿದ್ದಾರೆ.

ಮೃತ ನರ್ಮದಾಳ ಗಂಡ ಓಬಳೇಶ್ ಮಾತನಾಡಿ ಚಿಕಿತ್ಸೆ ನೀಡಿದ ಡಾ. ವಾಣಿರೆಡ್ಡಿಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆಯೆಂದು ನುಡಿದರು. ಬೆನ್ನಿನ ನೋವು ಎಂದು ಹೇಳಿದರೆ ರಾತ್ರಿ ಇಡೀ ಯಾರೂ ಚಿಕಿತ್ಸೆ ನೀಡಲಿಲ್ಲವೆಂದು ಮೃತ ಸಂಬಂಧಿ ಕಲ್ಪನಾ ನುಡಿದರು.ಚಿತ್ರಶೀರ್ಷಿಕೆ: ಮೃತ ನರ್ಮದಾ.