ಸಾರಾಂಶ
ರೋಣ:ಮರಳು ಮಾಫಿಯಾದ ಅತಿಯಾದ ಕಿರುಕುಳಕ್ಕೆ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ ಡಾ. ಶಶಿಧರ ಹಟ್ಟಿ (46) ಬಲಿಯಾಗಿದ್ದಾರೆ!
ತಾಲೂಕಿನ ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ ಅವರ ಮರಳು ಸಾಗಾಟದ ಹಣಕಾಸಿನ ವಿಷಯವಾಗಿ ಅತಿಯಾದ ಕಿರುಕುಳ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಡಾ.ಹಟ್ಟಿ.ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ಲುಂಗಿಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ವಿಷಯ ಗೊತ್ತಾಗಿದೆ. ಘಟನಾ ಸ್ಥಳಕ್ಕೆ ರೋಣ ಪಿ.ಎಸ್.ಐ. ಎಲ್.ಕೆ. ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತ ಡಾ. ಶಶಿಧರ ಅವರಿಗೆ ತಾಯಿ, ತಾಪಂ ಮಾಜಿ ಅಧ್ಯಕ್ಷೆ ಶಾಂತವ್ವ ಹಟ್ಟಿ, ಪತ್ನಿ ಸುನಂದಾ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ಡಾ. ಹಟ್ಟಿ ಅವರ ಪತ್ನಿ ಸುನಂದಾ ಹಟ್ಟಿ ನೀಡಿದ ದೂರಿನ ಅನ್ವಯ ರೋಣ ಪೊಲೀಸರು ಶರಣಗೌಡ ಪಾಟೀಲ್ ವಿರುದ್ಧ ಐಪಿಸಿ 306 ಅನ್ವಯ ಪ್ರಕರಣ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆರೋಪಿ ಶರಣಗೌಡ ಪಾಟೀಲ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.3 ಪುಟದ ಡೆತ್‌ನೋಟ್: ಆತ್ಮಹತ್ಯೆಗೂ ಮುನ್ನ ಡಾ.ಹಟ್ಟಿ 3 ಪುಟಗಳ ಡೆತ್‌ನೋಟ್ ಬರೆದಿದ್ದು, ತಾಲೂಕಿನ ಸರ್ಜಾಪುರ ಗ್ರಾಮದ ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಡೆತ್ ನೋಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ."ಧನದಾಯಿ ಶರಣಗೌಡನಿಗೆ ಧಿಕ್ಕಾರ. ಧನಪಿಶಾಚಿ ಶರಣಗೌಡನಿಗೆ ಬೊಮ್ಮಸಾಗರ ದುರ್ಗಮ್ಮನ ಶಾಪ ತಟ್ಟಲಿ. ಮೇಲೆ ಬಸಪ್ಪ ಒಳಗ ವಿಷಪ್ಪನಾದ ಶರಣಗೌಡ ಎಲ್. ಪಾಟೀಲ ಸರ್ಜಾಪುರ ನನ್ನ ಸಾವಿಗೆ ಕಾರಣ. ಆತನ ಹಣದ ಆಸೆಯೇ ನನ್ನ ದುರ್ಗತಿಗೆ ಕಾರಣ. ಈ ವ್ಯಕ್ತಿ ಅತ್ಯಂತ ಪ್ರಭಾವಿಯಾಗಿದ್ದರಿಂದ ಭೀಮು ಮತ್ತು ಶೇಖಣ್ಣ ಮಾಮ ಇಬ್ಬರು ಸೇರಿ ಎಚ್.ಕೆ.ಪಾಟೀಲರಿಂದ ತೀವ್ರವಾದ ಶಿಕ್ಷೆಗೆ ಒಳಪಡಿಸಿರಿ. ನಾನು ದಿನಾಲೂ ಸರಿಯಾದ ಲೆಕ್ಕ ಕೊಟ್ಟರೂ ಸಹ ಇನ್ನು ನಿನ್ನಿಂದ ಹಣ ಬರಬೇಕು ಎಂದು ಒತ್ತಡ ಮಾಡುತ್ತಿದ್ದು, ಆದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ... "
ಹೀಗೆ ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. 2 ಮತ್ತು 3ನೇ ಪುಟದಲ್ಲಿ ತನ್ನ ಮನೆತನದ ಆಸ್ತಿ ಹಂಚಿಕೆ, ಯಾರಿಂದ ಎಷ್ಟೇಷ್ಟು ಹಣ ಬರಬೇಕು ಎಂಬುದನ್ನು ಬರೆಯಲಾಗಿದೆ.ಪತ್ನಿ ದೂರು: ಪತಿ ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಡಾ. ಹಟ್ಟಿ ಅವರ ಪತ್ನಿ ಸುನಂದಾ ಹಟ್ಟಿ, "ಶಶಿಧರ ಹಾಗೂ ಶರಣಗೌಡ ಜೊತೆಗೂಡಿ ಆರೇಳು ವರ್ಷದಿಂದ ಮರಳು ವ್ಯವಹಾರ ನಡೆಸುತ್ತಿದ್ದರು. ಕಳೆದ 3 ತಿಂಗಳಿನಿಂದ ತಾಲೂಕಿನ ಹೊಳೆಮಣ್ಣೂರ ಬಳಿ ರಾಜು ಶಿರಗುಂಪಿ, ಅಶೋಕ ವಾಸವಿಶೆಟ್ಟರ್, ಶರಣಗೌಡ ಪಾಟೀಲ ಅವರು ಜೊತೆಗೂಡಿ ಮರಳು ಪಾಯಿಂಟ್ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಶರಣಗೌಡ ನನ್ನ ಪತಿಗೆ ಹಣಕಾಸಿನ ವಿಷಯವಾಗಿ ಭಾರೀ ಕಿರುಕುಳ ನೀಡುತ್ತಿದ್ದ. ನನ್ನ ಪತಿಯ ಸಾವಿಗೆ ಶರಣಗೌಡ ಪಾಟೀಲನ ಕಿರುಕುಳ, ಬೆದರಿಕೆಯೇ ಕಾರಣ ಎಂದು ದೂರಿದ್ದಾರೆ.ರೋಣ ತಾಲೂಕಿನಲ್ಲಿ ಮೊದಲಿನಿಂದಲೂ ಅಕ್ರಮ ಮರಳು ಸಾಗಾಟ ಅವ್ಯಾಹತವಾಗಿದ್ದು, ಆಗಾಗ ತ್ವೇಷಮಯ ಘಟನೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿ ವೈದ್ಯನನ್ನು ಬಲಿ ಪಡೆಯುವ ಮೂಲಕ ಮರಳು ಮಾಫಿಯಾದ ಕರಾಳ ಮುಖವನ್ನು ಬಿಚ್ಚಿಟ್ಟಿದೆ.
ವೈದ್ಯ ಶಶಿಧರ ಸಾವಿನ ಸುದ್ದಿ ತಾಲೂಕು ಸೇರಿದಂತೆ ಎಲ್ಲಡೆ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ವೈದ್ಯನ ಸಾವು ನೆನೆದು ಹಿರೇಹಾಳ ಹಾಗೂ ಸುತ್ತಲಿನ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.ಯಾರೀ ಶರಣಗೌಡ?:
ರೋಣ ತಾಲೂಕು ಸರ್ಜಾಪುರ ಗ್ರಾಮದ ನಿವಾಸಿ. ಸಿಂದನೂರು, ಸಿಂಗಟಾಲೂರು, ರೋಣ ಸೇರಿದಂತೆ ವಿವಿಧೆಡೆ ಮರಳು ಸಾಗಾಟದ ದಂಧೆ ಮಾಡುತ್ತಾನೆ. ಅದರಲ್ಲಿ ಅಕ್ರಮ ಸಾಗಾಟವೇ ಹೆಚ್ಚು ಎನ್ನುವ ಆರೋಪಗಳಿವೆ. ಅಲ್ಲದೇ ಅಕ್ರಮ ಸಾರಾಯಿ, ಅಕ್ರಮ ಕಲ್ಲು ಗಣಿಗಾರಿಕೆಯಲ್ಲೂ ಇವರ ಹೆಸರು ಕೇಳಿಬರುತ್ತಿದೆ.ರೋಣ ಕಾಂಗ್ರೆಸ್ ಶಾಸಕ ಜಿ.ಎಸ್.ಪಾಟೀಲರ ಆಪ್ತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮುಖಂಡ ಕೂಡ. ಪಾಟೀಲ್ ವಿರುದ್ಧ ಆಗಾಗ ಇಂಥ ಕಿರುಕುಳ, ಹಲ್ಲೆ, ದೌರ್ಜನ್ಯಗಳು ಕೇಳಿ ಬರುತ್ತಿದ್ದರೂ ಅವ್ಯಾವೂ ಎಫ್‌ಐಆರ್ ಆಗಿರಲಿಲ್ಲ. ತಮ್ಮ ರಾಜಕೀಯ ಪ್ರಭಾವದಿಂದ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದ. ಅಕ್ಕಪಕ್ಕದ ಊರಿನ ಯಾರೂ ಇವರ ವಿರುದ್ಧ ಉಸಿರೆತ್ತುವುದಿಲ್ಲ. ವೈದ್ಯರ ದೆತ್‌ನೋಟ್ ಇದೀಗ ಬಲೆಗೆ ಬೀಳಿಸಿದೆ.
ಅವರ ಊರ ಪಕ್ಕದ ಬೊಮ್ಮಸಾಗರದಲ್ಲಿ ನಡೆಯುವ ಅಪಾರ ಪ್ರಮಾಣದ ಪ್ರಾಣಿಬಲಿ ತಡೆಗೆ ಮುಂದಾದ ತಹಸೀಲ್ದಾರ, ಪೊಲೀಸ್ ಇನಸ್ಪೆಕ್ಟರ್, ಮಠಾಧೀಶರು, ಪತ್ರಕರ್ತರನ್ನು ಶಾಲೆಯಲ್ಲಿ ಕೂಡಿಹಾಕಿ ಬೆಂಕಿ ಹಚ್ಚುವ ಯತ್ನ ಮಾಡಿ, ದರ್ಪ ಮೆರೆದಿದ್ದ ಶರಣಗೌಡ ಪಾಟೀಲನನ್ನು ಅಂದೇ ಜಿಲ್ಲಾಡಳಿತ, ಗದಗ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹದ್ದುಬಸ್ತಿನಲ್ಲಿ ಇಟ್ಟಿದ್ದರೆ, ಇಂದು ಡಾ.ಹಟ್ಟಿ ಆತ್ಮಹತ್ಯೆ ವಿಷಯದಲ್ಲಿ ಮುಜುಗರ ಪಡುವ ಪ್ರಮೆಯ ಬರುತ್ತಿರಲಿಲ್ಲ.