ಸಾರಾಂಶ
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅನೇಕರು ತಮ್ಮ ಪ್ರಾಣ ಒತ್ತೆಯಿಟ್ಟು ರೋಗಿಗಳನ್ನು ಗುಣಪಡಿಸಿದ್ದಾರೆ. ಅಂತಹ ವೈದ್ಯರನ್ನು ಗೌರವಿಸುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ
ಕನ್ನಡಪ್ರಭ ವಾರ್ತೆ ವಿಜಯಪುರ
ವೈದ್ಯೋ ನಾರಾಯಣೋ ಹರಿಃ ಎಂಬಂತೆ ರೋಗಿಗಳ ಪಾಲಿಗೆ ದೇವರ ಸಮಾನವಾಗಿರುವ ವೈದ್ಯರು, ಹಗಲಿರುಳೆನ್ನದೇ ಸೇವೆಯಲ್ಲಿ ತೊಡಗಿರುತ್ತಾರೆ. ಅವರ ಸೇವೆ ಅತ್ಯಂತ ಪವಿತ್ರವಾದುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ರೋಗಿಗಳ ರೋಗ ನಿವಾರಣೆಗೆಂದೆ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳುತ್ತಾರೆ. ರೋಗಿಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ, ಅವರ ಆರೋಗ್ಯ ಸುಸ್ಥಿತಿಯಲ್ಲಿರಲಿ, ತನ್ಮೂಲಕ ಸಾಮಾಜಿಕ ಜೀವನ ಗುಣ ಮೌಲ್ಯವು ಉತ್ತಮಗೊಳ್ಳಲಿ ಎಂದು ಶ್ರಮವಹಿಸುತ್ತಾರೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅನೇಕರು ತಮ್ಮ ಪ್ರಾಣ ಒತ್ತೆಯಿಟ್ಟು ರೋಗಿಗಳನ್ನು ಗುಣಪಡಿಸಿದ್ದಾರೆ. ಅಂತಹ ವೈದ್ಯರನ್ನು ಗೌರವಿಸುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾದುದು ಎಂದರು.ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಡಾ.ಬಿ.ಸಿ.ರಾಯ್ ಜನ್ಮದಿನಾಚರಣೆಯನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಖ್ಯಾತ ವೈದ್ಯರಾಗಿ ತಮ್ಮ ಜೀವನವನ್ನು ಜನಸೇವೆಗಾಗಿ ಮುಡುಪಾಗಿಟ್ಟವರು. ಇದಕ್ಕಾಗಿ ವೈದ್ಯರೆಂದರೆ ರೋಗ ನಿವಾರಕರು, ಆರೋಗ್ಯ ರಕ್ಷಕರು ಹಾಗೂ ಆಯುಷ್ಯದ ವೃದ್ಧಿ ದಯಪಾಲಿಸುವ ದೇವಾಂಶ ಸಂಬೂತರು ಎಂದರು.
ರೋಟರಿ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್.ಕುಲಕರ್ಣಿ ಮಾತನಾಡಿ, ರೋಟರಿ ಸಂಸ್ಥೆ ವಿಶ್ವದೆಲ್ಲೆಡೆ ಪೋಲಿಯೋ ನಿರ್ಮೂಲನೆಗೆ ಪಣತೊಟ್ಟಿದ್ದು, ಎಲ್ಲ ಲಸಿಕೆಯ ಖರ್ಚನ್ನು ಸಂಸ್ಥೆ ನಿಭಾಯಿಸುತ್ತದೆ. ಹಾಗೆಯೇ ವೈದ್ಯರು ಆರೋಗ್ಯ ಮತ್ತು ಸಾರ್ವಜನಿಕ ಸಂರಕ್ಷಣೆಗಾಗಿ ಹೋರಾಡುತ್ತಿದ್ದು, ಇವರಿಗೆ ಗೌರವ ಸಮರ್ಪಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಇನ್ನರ್ ಸಂಸ್ಥೆಯ ಅಧ್ಯಕ್ಷೆ ಉಜ್ವಲಾ ಪಾಟೀಲ, ಕಾರ್ಯದರ್ಶಿ ರೇಖಾ ಕಲ್ಲೂರ, ವೈದ್ಯ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು.
ಡಾ. ಚಂದ್ರ ರಾಠೋಡ, ಡಾ.ಎಸ್.ಎಸ್.ನಾಗಠಾಣ, ಇಲಿಯಾಸ್, ಇಮಾಮ ಹುಲ್ಲೂರ, ಚಂದ್ರಶೇಖರ ಸಿಂಧೂರ, ಉದಯಕುಮಾರ, ಶ್ವೇತಾ ಗುನ್ಹಾಳಕರ ಸೇರಿದಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಶಸ್ತ್ರಚಿಕಿತ್ಸಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.