ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವೈದ್ಯಕೀಯ ಮಾಡಿದವರು ಅಮೆರಿಕಕ್ಕೆ ಹೋಗದೇ ಭಾರತದಲ್ಲಿಯೇ ಅವಕಾಶಗಳನ್ನು ಕಂಡುಕೊಳ್ಳಿ. ಈಗ ಇಲ್ಲಿಯೇ ವಿಶ್ವಗುಣಮಟ್ಟದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿವೆ. ಅನೇಕ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅವುಗಳನ್ನು ಮುನ್ನಡೆಸಿ, ರೋಗ ತಡೆಗಟ್ಟುವ ವಿಧಾನಗಳಿಗೆ ಪ್ರಾಮುಖ್ಯತೆ ನೀಡುತ್ತ, ಶೀಘ್ರ ರೋಗ ಕಂಡು ಹಿಡಿದು ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕಾಗಿದೆ. ಆರೈಕೆ, ಪುನರ್ವಸತಿ ನೀಡುತ್ತ ಆರೋಗ್ಯ ರಕ್ಷಣೆ ನೀಡಲು ಗಮನ ಹರಿಸುತ್ತಿದೆ. ಅದರಂತೆ ಆರೋಗ್ಯಯುತ ಸಮಾಜ ನಿರ್ಮಾಣ ನಿಮ್ಮ ಮೇಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಸಚಿವ ಜಗತ್ ಪ್ರಕಾಶ ನಡ್ಡಾ ಹೇಳಿದರು.ನಗರದಲ್ಲಿ ಮಂಗಳವಾರ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ ಆ್ಯಂಡ್ ರಿಸರ್ಚ್ (ಕೆಎಲ್ಇ ಡೀಮ್ಡ್ ಯುನಿವರ್ಸಿಟಿ) 15ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಸಂಯೋಜಿತ ಸೌಲಭ್ಯಗಳಿಗಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಅಲೋಪತಿ, ಆಯುರ್ವೇದ, ಹೊಮಿಯೋಪತಿ ಸೇರಿದಂತೆ ಹೊಲಿಸ್ಟಿಕ್ ಮೂಲಕ ರೋಗಗಳನ್ನು ತಡೆಗಟ್ಟುವ ಪ್ರಮುಖ ಘಟದಲ್ಲಿ ನಾವು ನಿಲ್ಲಬೇಕಾಗಿದೆ. ಭಾರತದ ವೈದ್ಯಕೀಯ ವಿಜ್ಞಾನದ ಸಮಗ್ರ ಮನೋಭಾವದ ದೃಷ್ಟಿಯಿಂದ ಯೋಚಿಸುತ್ತ ರೋಗಗಳನ್ನು ತಡೆಗಟ್ಟಬೇಕಿದೆ. ಈಗಾಗಲೇ ಅಲೋಪತಿಯೊಂದಿಗೆ ಆಯುರ್ವೇದ ಪದವಿ ಅಳವಡಿಸಿಕೊಳ್ಳಲು ಯೋಚಿಸಲಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸ್ಪಂದಿಸಬೇಕು ಎಂದರು.ವೈದ್ಯಕೀಯ ವೃತ್ತಿಪರರು ಆಧುನಿಕ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ ಅಭಿಯಾಂತ್ರಿಕತೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಇದರಿಂದ ವೈದ್ಯಕೀಯ ನವೋದ್ಯಮಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳು ಉದಯೋನ್ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಕ್ಷೇತ್ರಗಳಾಗಿವೆ. ಕಲಿಕೆ ನಿರಂತರವಾಗಿರಬೇಕು. ನಾನೇ ತಿಳಿದವನು ಎಂದರೆ ಅಂದಿಗೆ ನಿಮ್ಮ ಬೆಳವಣಿಗೆ ನಿಂತಂತೆ. ಆದ್ದರಿಂದ ವಿನಮ್ರರಾಗಿರಿ. ಮುಕ್ತವಾಗಿದ್ದು ಹೊಸ ಆಲೋಚನೆಗಳಿಂದ ಎಲ್ಲರಿಂದಲೂ ಕಲಿಯಲು ಸಿದ್ದರಾಗಿರಿ ಎಂದು ಕರೆ ನೀಡಿದರು.
ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ಸ್ವೀಕರಿಸಿದ ಮುಂಬೈನ ಟಾಟಾ ಮೆಮೊರಿಯಲ್ ಕೇಂದ್ರದ ಡೆಪ್ಯೂಟಿ ಡೈರೆಕ್ಟರ್ ಡಾ.ಶೈಲೇಶ ಶ್ರೀಖಂಡೆ ಮಾತನಾಡಿ, ಪ್ರಯಾಣವು ನಮಗೆ ಸಾಕಷ್ಟು ಕಲಿಯಲು ಅವಕಾಶ ನೀಡುತ್ತದೆ. ಜೀವನದಲ್ಲಿ ಉತ್ತಮ ಸೇವೆಯೇ ಮುಖ್ಯವಾಗಿರಬೇಕು. ಭಾರತೀಯ ಸಮಸ್ಯೆಗಳಿಗೆ ಮುಖ್ಯವಾಗಿ ನಾವೇ ಪರಿಹಾರ ಕಂಡುಕೊಳ್ಳಬೇಕು. ಅಷ್ಟೇ ಅಲ್ಲ, ರೋಗಿಗಳಿಗೆ ನೀಡುವ ಸೇವೆ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಬೇಕು. ಭಾರತದಲ್ಲಿ ರೋಗಿಯ ಆರೈಕೆ ಮಾಡುವ ಕೌಶಲ್ಯವುಳ್ಳ ನರ್ಸಿಂಗ್ ಸಿಬ್ಬಂದಿ ಕೊರತೆಯಂತೆ ವೈದ್ಯರೂ ಕೂಡ ಸಿಗುತ್ತಿಲ್ಲ. ಆದ್ದರಿಂದ ಮುಂಬರುವ ಎರಡು ದಶಕಗಳಲ್ಲಿ ಎದುರಾಗುವ ಸವಾಲು ಎದುರಿಸಲು ಸಿದ್ಧರಾಗಿರಬೇಕು ಎಂದರು.ಗೌರವ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಾರತದಲ್ಲಿ ಈ ಹಿಂದೆ 387 ಮಹಾವಿದ್ಯಾಲಯಗಳಿದ್ದವು. ಆದರೆ ಇಂದು 706 ವೈದ್ಯಕೀಯ ಮಹಾವಿದ್ಯಾಲಗಳಿವೆ. ವೈದ್ಯರ ಕೊರತೆ ಅರಿತ ಪ್ರಧಾನಿ ಮೋದಿ ಅವರು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಹೆಚ್ಚಿಸುತ್ತ ಜನರ ಆರೋಗ್ಯ ಸುಧಾರಿಸಲು ಗಮನ ಹರಿಸಿದ್ದಾರೆ. ಎಲ್ಲರಿಗೂ ವೈದ್ಯಕೀಯ ಸೇವೆ ಹಾಗೂ ಕೈಗೆಟಕುವ ದರದಲ್ಲಿ ಔಷಧಗಳು ಲಭಿಸಲಿ ಎಂದು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವದಲ್ಲಿಯೇ 18-35 ವರ್ಷದೊಳಗಿನ ಅತೀ ಹೆಚ್ಚು ಅಂದರೆ 60 ಕೋಟಿಗೂ ಅಧಿಕ ಯುವಕರನ್ನು ಹೊಂದಿದ ದೇಶ ಭಾರತ. ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುತ್ತ, ಆರ್ಥಿಕವಾಗಿ ಹಿಂದುಳಿದವರೂ ವೈದ್ಯರಾಗಬಹುದು ಎಂಬುವುದನ್ನು ತೋರಿಸಿಕೊಡಲಾಗಿದೆ. ಅತ್ಯಂತ ಪಾರದರ್ಶಕವಾಗಿ ವೈದ್ಯಕೀಯ ಸೀಟುಗಳನ್ನು ಹಂಚಲಾಗುತ್ತಿದೆ ಎಂದ ಅವರು, ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆಯನ್ನು ಡಾ.ಪ್ರಭಾಕರ ಕೋರೆ ಅವರು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಕಾಹೆರನ ಕುಲಾಧಿಪತಿ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕಾಹೆರ ಉಪಕುಲಪತಿ ಡಾ.ನಿತಿನ ಗಂಗಾಣೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಹಾಗೂ ಕಂಟ್ರೋಲರ ಆಫ್ ಎಕ್ಸಾಮಿನೇಶನ ಡಾ.ಚಂದ್ರಾ ಮೆಟಗುಡ ಉಪಸ್ಥಿತರಿದ್ದರು.1844 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮುಗಿಸಿದ 1844 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 40 ಪಿಎಚ್‌ಡಿ, 29 ಪೋಸ್ಟ್ ಡಾಕ್ಟರಲ್ ಪದವಿ, 660 ಸ್ನಾತಕೋತ್ತರ ಪದವಿ, 1080 ಪದವಿ, 9 ಪಿಜಿ ಡಿಪ್ಲೊಮಾ, 11 ಡಿಪ್ಲೊಮಾ, 4 ಫೆಲೋಶಿಪ್ ಹಾಗೂ 11 ಸರ್ಟಿಫಿಕೇಟ್ ಕೋರ್ಸ್ ಪದವಿ ಪ್ರದಾನ ಮಾಡಲಾಯಿತು. 35 ವಿದ್ಯಾರ್ಥಿಗಳು 46 ಸ್ವರ್ಣ ಪದಕ ಪಡೆದಿದ್ದು, ಅದರಲ್ಲಿ 28 ವಿದ್ಯಾರ್ಥಿನಿಯರು, 7 ವಿದ್ಯಾರ್ಥಿಗಳು ಇದ್ದಾರೆ. ಕೆಎಲ್ಇ ಬಿ.ಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ.ಶ್ವೇತಾ ರಾಜಶೇಖರ ಗೋರೆ ಅವರು ಆಯುರ್ವೇದ ಪದವಿದಲ್ಲಿ 4 ಸ್ವರ್ಣ ಪದಕ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ.ಕರಮುಡಿ ಪ್ರತ್ಯುಷಾ ಅವರು ವೈದ್ಯಕೀಯ ಸ್ನಾತಕೋತ್ತರದಲ್ಲಿ 3 ಸ್ವರ್ಣ ಪದಕ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅತ್ಯಧಿಕ ಸ್ವರ್ಣ ಪದಕ ಪಡೆದಿದ್ದಾರೆ.ಇಂದು ದೇಶಾದ್ಯಂತ 1.75 ಲಕ್ಷ ಆಯುಷ್ಮಾನ್ ಆರೋಗ್ಯ ಕೆಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸುತ್ತಿವೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ 319 ವೈದ್ಯಕೀಯ ಮಹಾವಿದ್ಯಾಲಯಗಳು ಕಾರ್ಯಾರಂಭ ಮಾಡಿದ್ದು ಈಗ 706 ಮಹಾವಿದ್ಯಾಲಯಗಳಿವೆ. ಕಳೆದ 10 ವರ್ಷಗಳಲ್ಲಿ ಎಂಬಿಬಿಎಸ್ ಹಾಗೂ ಸ್ನಾತ್ತಕೋತ್ತರ ಸೀಟ್‌ಗಳಲ್ಲಿ ಶೇ.130ರಷ್ಟು ಹೆಚ್ಚಳವಾಗಿದೆ.
ಜಗತ್ ಪ್ರಕಾಶ ನಡ್ಡಾ, ಸಚಿವ, ಕೇಂದ್ರ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ----
ಕೋಟ್....ಭಾರತದಲ್ಲಿ ಪ್ರಾರಂಭಿಸಿದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯು ವಿಶ್ವದಲ್ಲಿಯೇ ಅತ್ಯಂತ ಬೃಹತ್ ವಿಮಾ ಯೋಜನೆ. ಕೇವಲ ಭಾರತದಲ್ಲಿ ವೈದ್ಯರ ಮತ್ತು ದಾದಿಯರ ಕೊರತೆ ಇಲ್ಲ. ವಿಶ್ವದಾದ್ಯಂತ ವೈದ್ಯರ ಕೊರತೆ ಇದೆ. ಅದನ್ನು ಭಾರತ ಮಾತ್ರ ನೀಗಿಸಬಲ್ಲದು.
- ಪ್ರಹ್ಲಾದ್ ಜೋಶಿ, ಸಚಿವ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ