ಕನ್ನಡಪ್ರಭ ವಾರ್ತೆ ಬೆಂಗಳೂರು
ಮಗುವಿನ ಶ್ವಾಸನಾಳದಲ್ಲಿ ಪಿನ್ನು ಸಿಲುಕಿ ಉಸಿರಾಟಕ್ಕೆ ಕುತ್ತು ತಂದ ಪ್ರಕರಣವೊಂದರಲ್ಲಿ ನಗರದ ಆಸ್ಪತ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಪಿನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಯಶವಂತಪುರದ ಸ್ಪರ್ಶ್ ಆಸ್ಪತ್ರೆ ಮಕ್ಕಳ ವಿಭಾಗದ ಶ್ವಾಸಕೋಶ ತಜ್ಞ ಡಾ.ಗಣೇಶ್ ಪ್ರತಾಪ್ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯರು. ಎಂಟು ವರ್ಷದ ಬಾಲಕನನ್ನು ಪೋಷಕರು ಕೆಮ್ಮು ಹಾಗೂ ಉಸಿರಾಟ ಸಮಸ್ಯೆ, ಉಬ್ಬಸದಂತಹ ಶಬ್ದ (ವೀಜಿಂಗ್) ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಕರೆತಂದಿದ್ದರು. ಆರಂಭದಲ್ಲಿ ಇದು ತೀವ್ರ ಆಸ್ತಮಾ ಎಂಬಂತೆ ಕಂಡುಬಂತು. ಆದರೆ, ಸ್ಕ್ಯಾನ್ ಮಾಡಿ ನೋಡಿದಾಗ ಸಣ್ಣ ಪಿನ್ನು ಶ್ವಾಸನಾಳದ ಮಧ್ಯೆದಲ್ಲಿ ಸಿಲುಕಿರುವುದು ಪತ್ತೆಯಾಯಿತು ಎಂದು ವೈದ್ಯ ಗಣೇಶ್ ವಿವರಿಸಿದರು.
ಆ ಚೂಪಾದ ವಸ್ತು ತೆಗೆದರೆ ಪ್ರಮುಖ ರಕ್ತನಾಳಕ್ಕೆ ಹಾನಿಯಾಗುವ ಅಥವಾ ಸಂಪೂರ್ಣವಾಗಿ ಆಮ್ಲಜನಕದ ಪೂರೈಕೆಗೆ ತಡೆಯುವ ಅಪಾಯವಿತ್ತು. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಕೂಡಲೆ ಸಾಮಾನ್ಯ ಅನಸ್ತೀಷಿಯಾ ನೀಡಿ ಶ್ವಾಸಕೋಶದ ಸೂಕ್ಷ್ಮ ಒಳಪದರಕ್ಕೆ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಹಾಗೂ ಸುಧಾರಿತ ಬ್ರಾಂಕೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಪಿನ್ ಹೊರತೆಗೆಯಲಾಯಿತು ಎಂದು ಡಾ.ಗಣೇಶ್ ಪ್ರತಾಪ್ ಹೇಳಿದರು.