ವೈದ್ಯರು ರೋಗಿಗಳಿಗೆ ಸದಾಕಾಲ ಸಿಗುವಂತಿರಬೇಕು

| Published : Dec 05 2024, 12:32 AM IST

ವೈದ್ಯರು ರೋಗಿಗಳಿಗೆ ಸದಾಕಾಲ ಸಿಗುವಂತಿರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರು ಸದಾ ಕಾಲ ರೋಗಿಗಳ ಕೈಗೆ ಸಿಗುವಂತಿರಬೇಕು ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.ತಾಲೂಕಿನ ಚಿಕ್ಕಜಾಜೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯರು, ದಾದಿಯರ ಮತ್ತು ಡಿ.ಗ್ರೂಪ್ ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ವೈದ್ಯರು ಸದಾ ಕಾಲ ರೋಗಿಗಳ ಕೈಗೆ ಸಿಗುವಂತಿರಬೇಕು ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.ತಾಲೂಕಿನ ಚಿಕ್ಕಜಾಜೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೈದ್ಯರು, ದಾದಿಯರ ಮತ್ತು ಡಿ.ಗ್ರೂಪ್ ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.ಎಲ್ಲರೂ ಮಣಿಪಾಲ, ಶಿವಮೊಗ್ಗ, ಮಂಗಳೂರು ಆಸ್ಪತ್ರೆಗಳಿಗೆ ಹೋಗಲು ಆಗುವುದಿಲ್ಲ. ನಮ್ಮ ವೈದ್ಯರುಗಳು ರೋಗಿಗಳಿಗೆ ಸಿಗುವಂತಿದ್ದರೆ ರೋಗಿಗಳು ದೂರ ಹೋಗುವುದೂ ಇಲ್ಲ. ವೈದ್ಯರು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ವಾಸವಿರಲು ಅನುಕೂಲವಾಗುವಂತೆ ಈಗ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುತ್ತಿದೆ ಎಂದರು.ಪಟ್ಟಣದ ಕೆರೆ ಸಮೀಪ ಡಬ್ಬಲ್ ರಸ್ತೆಯಾಗಿದೆ. ಸಾಸಲು ಸರ್ಕಲ್‍ನಿಂದ ಹಿರೇಬೆನ್ನೂರು ಸರ್ಕಲ್‍ವರಗೆ ರಸ್ತೆಗೆ ನೂರು ಕೋಟಿ ರೂ.ಗಳನ್ನು ನೀಡಿದ್ದೇನೆ. ಬ್ರಿಡ್ಜ್‌ಗೆ ₹1 ಕೋಟಿ, ಸಿ.ಸಿ. ರಸ್ತೆಗೆ ₹ಅರವತ್ತು ಲಕ್ಷ ಕೊಟ್ಟಿದ್ದೇನೆ. ಅಧಿಕಾರ, ಅಂತಸ್ತು ಯಾವುದು ಶಾಶ್ವತವಲ್ಲ.

ಇರುವಷ್ಟು ದಿನ ಕ್ಷೇತ್ರದ ಜನರಿಗೆ ಒಳ್ಳೆಯದು ಮಾಡಬೇಕೆನ್ನುವ ಬದ್ಧತೆ ಇಟ್ಟುಕೊಂಡಿರುವ ರಾಜಕಾರಣಿ ನಾನು. ₹35 ಕೋಟಿ ವೆಚ್ಚದಲ್ಲಿ ಫ್ಲೈ ಓವರ್, ಭೂತಪ್ಪನ ಗುಡಿ ಹತ್ತಿರವೂ ಫ್ಲೈಓವರ್ ಕಟ್ಟಿಸುತ್ತೇನೆ. ಶಾಲಾ-ಕಾಲೇಜು, ಕೆರೆ ಕಟ್ಟೆ, ಸಿ.ಸಿ.ರಸ್ತೆ, ಆಸ್ಪತ್ರೆ, ಚೆಕ್‍ಡ್ಯಾಂಗಳ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸ್ವಂತ ಖರ್ಚಿನಿಂದ ಸರ್ಕಾರಿ ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತ ಕೆಲಸ ಮಾಡಿಲ್ಲ. ಇನ್ನು ಆರು ತಿಂಗಳೊಳಗೆ ತಾಲೂಕಿನಲ್ಲಿರುವ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುವುದೆಂದು ಭರವಸೆ ನೀಡಿದರು.ಕ್ಷೇತ್ರಾದ್ಯಂತ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ನೀರು ತರಲು ₹367 ಕೋಟಿ ಖರ್ಚು ಮಾಡಲಾಗುತ್ತಿದೆ. ನೀರಿನ ಮಧ್ಯೆ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಕೂರಿಸಿ ಮೋಟಾರ್ ಅಳವಡಿಸಲಾಗುವುದು. ಹಾಲೇನಹಳ್ಳಿ ಸಮೀಪ ₹60 ಕೋಟಿ ವೆಚ್ಚದಲ್ಲಿ ಫಿಲ್ಟರ್ ಹಾಕಿ ಇನ್ನು ಮೂವತ್ತು ವರ್ಷಗಳ ಕಾಲ ನೀರಿಗೆ ತೊಂದರೆಯಿಲ್ಲದಂತೆ ನೋಡಿಕೊಳ್ಳಲಾಗುವುದು. ಅದೆ ರೀತಿ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ₹500 ಕೋಟಿ ವೆಚ್ಚದಲ್ಲಿ ನಾಲ್ಕು ನೂರು ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು. ತೆಂಗು ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ರೈತರಿಗೆ ಇನ್ನು ನೂರು ವರ್ಷಗಳ ಕಾಲ ಕರೆಂಟ್ ಸಮಸ್ಯೆಯಾಗುವುದಿಲ್ಲ ಎಂದರು.ಭರಮಸಾಗರದಲ್ಲಿ ಮೊದಲನೆ ಬಾರಿಗೆ ಶಾಸಕನಾದಾಗ ಸರ್ಕಾರದಲ್ಲಿ ಹಣವಿರುತ್ತಿರಲಿಲ್ಲ. ಅಂತಹ ಕಷ್ಟದ ಕಾಲದಲ್ಲಿಯೇ ಅನುದಾನ ತಂದು ಎಲ್ಲಾ ಹಳ್ಳಿಗಳಲ್ಲೂ ಸಿಮೆಂಟ್ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೂ ನನ್ನನ್ನು ಗೆಲ್ಲಿಸಿದರು. ಮೂವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ನಾನು ಮಂತ್ರಿಯಲ್ಲ. ಸಾಧಾರಣ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲು-ಇರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.

ಗುಂಜಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ದಾಸಪ್ಪ, ಉಪಾಧ್ಯಕ್ಷ ನವೀನ್‍ಕುಮಾರ್, ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಎಸ್.ಮೂರ್ತಿ, ಗಂಗಣ್ಣ, ಆನಂದಪ್ಪ, ಜಗದೀಶ್, ಗುರುಸ್ವಾಮಿ, ಗೋವಿಂದಪ್ಪ, ಓಂಕಾರಪ್ಪ, ಖಲೀಲ್, ರುದ್ರಣ್ಣ, ಡಾ.ಪ್ರದೀಪ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.