ಸಾರಾಂಶ
ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ
ಹಾವೇರಿ: ಆಸ್ಪತ್ರೆಗೆ ಬರುವ ರೋಗಿಗಳ ಜತೆಗೆ ಸೌಜನ್ಯದಿಂದ ವರ್ತಿಸುವ ಮೂಲಕ ವೈದ್ಯರು ಉತ್ತಮ ಸೇವೆ ನೀಡಬೇಕು. ತಮ್ಮ ಗ್ರಾಮದಲ್ಲಿ ಸ್ವಚ್ಛತೆಗೆ ನಿಗಾ ವಹಿಸಲು ಗ್ರಾಮಸ್ಥರು ವೈದ್ಯರೊಂದಿಗೆ ಸಮನ್ವಯ ಸಾಧಿಸಬೇಕು.ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಾಮನಿರ್ದೇಶಿತ ಪದಾಧಿಕಾರಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು, ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ. ಸಣ್ಣಪುಟ ಕಾಯಿಲೆಗಳಿಂದ ಹಿಡಿದು ಗಂಭೀರ ಕಾಯಿಲೆಗಳಿಗೆ ಹಾಗೂ ತುರ್ತು ಅಪಘಾತ ಸಂದರ್ಭದಲ್ಲಿ ವೈದ್ಯರು ನೀಡುವ ಉಪಚಾರದಿಂದ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು. ತಾಲೂಕಿನಲ್ಲಿ ಉತ್ತಮ ಆರೋಗ್ಯ ನಿರ್ಮಾಣಕ್ಕೆ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಸಾಮಗ್ರಿ ಖರೀದಿಸಲು ₹58.16 ಲಕ್ಷ ಅನುದಾನ ನೀಡಿರುವೆ. ನನ್ನ ಅಧಿಕಾರವಧಿಯಲ್ಲಿ ವೈದ್ಯಕೀಯ ಸೇವೆಗೆ ಆದ್ಯತೆ ನೀಡುವೆ ಎಂದರು.ತಾಲೂಕಿನ ಆಸ್ಪತ್ರೆಗಳಿಗೆ ಸಂಬಂಧಿಸಿದ ಹಳೆಯ ಕಟ್ಟಡ ತೆರವು, ಆಸ್ಪತ್ರೆ ಸುತ್ತಲೂ ಸ್ವಚ್ಛತೆಗೆ ಆದ್ಯತೆ, ಆ್ಯಂಬುಲೆನ್ಸ್ ಖರೀದಿ, ಶವಾಗಾರ ಸೌಲಭ್ಯ, ಎಕ್ಸರೇ ಕೇಂದ್ರ ಸ್ಥಾಪನೆಗೆ ಆರೋಗ್ಯ ಸಚಿವರ ಮನವೊಲಿಸಿ ಅನುದಾನ ತರುವೆ. ಶಸ್ತ್ರಚಿಕಿತ್ಸೆ, ಅನಸ್ತೇಶಿಯಾ ಹಾಗೂ ಮಕ್ಕಳ ಆಸ್ಪತ್ರೆಗೆ ಸರ್ಕಾರ ಆದ್ಯತೆ ನೀಡಿದೆ. ಹಾವೇರಿ ಜಿಲ್ಲಾಸ್ಪತ್ರೆ ಮೇಲಿನ ಕಾರ್ಯಭಾರ ಒತ್ತಡ ಕಡಿಮೆಗೊಳಿಸಲು ಈಗಾಗಲೇ ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿದೆ. ವೈದ್ಯರ ಸೇವೆ ಚುರುಕಾಗಿರಲಿ ಮತ್ತು ಚೆನ್ನಾಗಿರಲಿ. ಆರೋಗ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆಗೆ ನಾಮನಿರ್ದೇಶಿತ ಪದಾಧಿಕಾರಿಗಳು ಆರೋಗ್ಯ ಇಲಾಖೆ ಜತೆಗೆ ಸಹಕರಿಸಲಿ ಎಂದರು.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಮೈದೂರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರು, ಗುತ್ತಲ ಪಪಂ ಸದಸ್ಯ ಎಸ್.ಜಿ. ಹೊನ್ನಪ್ಪನವರ, ನಾಮನಿರ್ದೇಶಿತ ಸದಸ್ಯರಾದ ಶಿವಪ್ಪ ಅಂಕಲಿ, ನಾಗಪ್ಪ ಮಡಿವಾಳರ, ಹನುಮಂತಪ್ಪ ಗೊಲ್ಲರ, ಎಸ್.ಜಿ. ದಂಡಿಗೇನಹಳ್ಳಿ, ಹೊನ್ನಪ್ಪ ಆರ್, ವಸಂತ ಹಡಗಲಿ, ದುದ್ದುಸಾಬ ನದಾಫ್ ಉಪಸ್ಥಿತರಿದ್ದರು.