ವೈದ್ಯರು ನಿಸ್ವಾರ್ಥ ವೃತ್ತಿ ಪರತೆ ಬೆಳಸಿಕೊಳ್ಳಬೇಕು

| Published : Nov 20 2024, 12:35 AM IST

ಸಾರಾಂಶ

ಉತ್ತಮ ವೈದ್ಯ ರೋಗಿಗೆ ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ರೋಗಿಯನ್ನು ಮಾನವೀಯ ಗುಣಗಳಿಂದ ಕಾಣಬೇಕು. ವೈದ್ಯರು ಹಣದ ಬಗ್ಗೆ ಯೋಚಿಸದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಹಣವೇ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವೈದ್ಯಕೀಯ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ವೈದ್ಯರನ್ನು ಗೌರವದಿಂದ ಕಾಣುವ ಹಾಗೂ ದೊಡ್ಡ ಸ್ಥಾನದಲ್ಲಿ ಗುರುತಿಸುವ ವೃತ್ತಿಯಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದರು.

ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವೈದ್ಯಕೀಯ ವೃತ್ತಿ ಉದಾತ್ತ ಕೆಲಸ, ವೈದ್ಯರಾದ ನಂತರ ನಿಸ್ವಾರ್ಥ ವೃತ್ತಿಪರತೆ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರಮಾಣಿಕ ಸೇವೆ ಸಲ್ಲಿಸಿ

ಉತ್ತಮ ವೈದ್ಯ ರೋಗಿಗೆ ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ರೋಗಿಯನ್ನು ಮಾನವೀಯ ಗುಣಗಳಿಂದ ಕಾಣಬೇಕು. ವೈದ್ಯರು ಹಣದ ಬಗ್ಗೆ ಯೋಚಿಸದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಹಣವೇ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ದೇಶದ ಬೆಳವಣಿಗೆಯನ್ನು ನಿರ್ಣಯಿಸುವ ಪ್ರಮುಖ ಕ್ಷೇತ್ರಗಳು, ತಮ್ಮ ಬಹುದಿನಗಳ ಕನಸು ಈ ಮೆಡಿಕಲ್ ಕಾಲೇಜು. ಆದ್ದರಿಂದಲೇ ಮೆಡಿಕಲ್ ಕಾಲೇಜು ತಂದು ಈ ಭಾಗದ ರೈತರ ಮತ್ತು ಮಧ್ಯಮ ವರ್ಗದವರ ಮಕ್ಕಳು ವೈದ್ಯರಾಗಬೇಕು ಎಂಬ ನನ್ನ ಆಸೆ ಈಡೇರಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನರ್ಸಿಂಗ್‌ ಗೌರವ ವೃತ್ತಿ

ಶುಶ್ರೂಷಕ ವೃತ್ತಿ ಸೇವೆಯ ಜತೆಗೆ ಆತ್ಮತೃಪ್ತಿ ನೀಡುವ ವೃತ್ತಿಯಾಗಿದ್ದು ನರ್ಸಿಂಗ್‌ ವಿದ್ಯಾರ್ಥಿಗಳು ವೃತ್ತಿಯನ್ನು ಗೌರವದಿಂದ ಸ್ವೀಕರಿಸಬೇಕು. ವಿದ್ಯಾರ್ಥಿಗಳಿಗೆ ರೋಗಿಯ ಆರೈಕೆ ಮತ್ತು ಕರ್ತವ್ಯ ನಿಷ್ಠೆ ಉಳ್ಳವರಾದಾಗ ಮಾತ್ರ ವೃತ್ತಿಗೆ ಗೌರವ ದೊರಕಿಸಿಕೊಟ್ಟಂತಾಗುತ್ತದೆ. ರೋಗಿಗೆ ಹತ್ತಿರವಾಗಿ ಅವರ ಯೋಗ ಕ್ಷೇಮ ನೋಡಿಕೊಳ್ಳುವ ಜತೆಗೆ ಮಹತ್ವದ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಈ ವೃತ್ತಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದರು.

ಈ ವೇಳೆ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಡೀನ್ ಡಾ.ಎಂ.ಎಲ್. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾದೇವಿ, ಮುಖ್ಯ ಆಡಳಿತಾಧಿಕಾರಿ ಆರತಿ ಆನಂದ್, ನೋಡಲ್ ಅಧಿಕಾರಿ ಡಾ.ಸಿ.ಎನ್. ರವೀಂದ್ರ, ಡಾ.ಎಂ.ಆರ್. ಅನಿತ, ಡಾ.ರಮೇಶ್, ಡಾ. ಸುರೇಶ್ ನಾಯಕ್, ಡಾ.ಪ್ರಕಾಶ್ ಸಾಹು, ಡಾ.ಸಿ.ಎಸ್. ನಾಗಲಕ್ಷ್ಮಿ,ಡಾ. ಪುಷ್ಪ,ಡಾ.ಮಂಜುಳ, ಚೈತ್ರರಾವ್, ಡಾ. ಅರ್ಜುನ್ ಬಹದ್ದೂರ್, ಡಾ. ಶಂಕರಪ್ಪ, ಡಾ. ಅನಿತಾಲಕ್ಷ್ಮಿ,ಡಾ. ಭಾರ್ಗವಿ, ಡಾ. ಜ್ಯೋತಿ, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ಮತ್ತಿತರರು ಇದ್ದರು.