ಸಾರಾಂಶ
-ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ -ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಬಂದ್‌ಕನ್ನಡಪ್ರಭ ವಾರ್ತೆ ರಾಮನಗರ
ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರದಿಂದಾಗಿ ಶನಿವಾರ ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗಾಗಿ ಪರದಾಟ ನಡೆಸಿದರು.ಖಾಸಗಿ ಕ್ಲಿನಿಕ್‌ಗಳು, ನರ್ಸಿಂಗ್ ಹೋಂಗಳು ಬಾಗಿಲು ಮುಚ್ಚಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಿ, ತುರ್ತು ಚಿಕಿತ್ಸೆ ಮುಂದುವರೆಸಲಾಗಿತ್ತು. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಭಾರತೀಯ ವೈದ್ಯಕೀಯ ಸಂಘ ದೇಶಾದ್ಯಂತ ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಗೆ ಕರೆ ನೀಡಿತ್ತು. ಹಾಗಾಗಿ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಚಿಕಿತ್ಸೆ ಇಲ್ಲದೆ ಪರದಾಡಿದ ದೃಶ್ಯ ಕಂಡುಬಂದಿತು.ಶನಿವಾರ ಬೆಳಗ್ಗೆಯಿಂದಲೇ ಒಪಿಡಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರು. ಅದರಲ್ಲೂ ಹಿರಿಯ ನಾಗರೀಕರು ಹಾಗೂ ಗರ್ಭಿಣಿಯರು, ಮಕ್ಕಳಿಗೆ ಸಾಕಷ್ಟು ತೊಂದರೆ ಆಯಿತು. ವೈದ್ಯರ ಮುಷ್ಕರದ ಮಾಹಿತಿ ಇಲ್ಲದ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯದೆ ವಾಪಸ್ಸಾಗುತ್ತಿದ್ದರು.
ಇನ್ನೊಂದೆಡೆ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳು ಮುಷ್ಕರ ನಡೆಸುತ್ತಿರುವ ಕುರಿತು ಆಸ್ಪತ್ರೆ ಮುಂಭಾಗ ಹೊರ ರೋಗಿಗಳ ಸೇವೆ ಸ್ಥಗಿತ ಮಾಡಿರುವ ಕುರಿತು ಬೋರ್ಡ್ ಹಾಕಿದ್ದರು.ಜಿಲ್ಲಾಸ್ಪತ್ರೆಯಲ್ಲಿಯೂ ಸೇವೆ ಬಂದ್:
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರು. ಹೊರ ರೋಗಿಗಳ ಸೇವೆಯನ್ನು ಬಂದ್ ಮಾಡಿ, ತುರ್ತು ಚಿಕಿತ್ಸೆ ಮುಂದುವರೆಸಲಾಗಿತ್ತು. ಇನ್ನು ಜಿಲ್ಲಾಸ್ಪತ್ರೆಯ ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಸೇವೆ ನೀಡಿದರು. ಹೊರ ರೋಗಿಗಳಿಗೆ ಚಿಕಿತ್ಸೆ ಲಭಿಸದೆ ವಾಪಸ್ಸಾಗುತ್ತಿದ್ದರು.ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆಸ್ಪತ್ರೆಯಲ್ಲಿದ್ದು, ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ, ವೈದ್ಯಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಸೇವೆ ನೀಡುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸ ಡಾ.ಮಂಜುನಾಥ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣದಲ್ಲೂ ಮುಷ್ಕರ:ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ಸೇವೆಯನ್ನು ಬಂದ್ ಮಾಡಿತ್ತು. ಈ ವೇಳೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಟ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಯಿಂದ ನೇರವಾಗಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರೂ ಇಲ್ಲಿಯೂ ಸೇವೆ ಲಭಿಸಲಿಲ್ಲ. ವಿಧಿಯಿಲ್ಲದೆ ಚಿಕಿತ್ಸೆ ಪಡೆಯದೆ ವಾಪಸ್ಸು ಮನೆಗೆ ವಾಪಸ್ಸಾದರು. ಇನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಹಾರೋಹಳ್ಳಿ ತಾಲೂಕುನಲ್ಲು ಬೆಂಬಲ:ತಾಲೂಕಿನ ಕೆಲವು ಕಡೆ ಒಪಿಡಿಗಳಲ್ಲಿ ಸೇವೆ ಒದಗಿಸಲಾಗಿದ್ದು,ಕೆಲವು ಕಡೆ ಸೇವೆಯನ್ನು ಬಂದ್ ಮಾಡಲಾಗಿತ್ತು. ಇದನ್ನು ಹೊರತು ಪಡಿಸಿದರೆ, ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ತುರ್ತು ಸೇವೆ ನೀಡಲಾಗಿದೆ. ಹಾಗಾಗಿ ಹಾರೋಹಳ್ಳಿ ತಾಲೂಕಿನಲ್ಲಿ ಮುಷ್ಕರ ಬಿಸಿ ತಟ್ಟಿಲ್ಲ.
ಮಾಗಡಿಯಲ್ಲಿ ಎಂದಿನಂತೆ ಸೇವೆ :ತಾಲೂಕಿನ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂದಿನಂತೆ ಒಪಿಡಿ ಸೇವೆ ಒದಗಿಸಲಾಗಿದ್ದು, ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜತೆಗೆ, ತಾಲೂಕಿನ ಶೇ.80ರಷ್ಟು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸೇವೆ ಒದಗಿಸಿದ್ದು, ಕೆಲವು ಕಡೆ ಮಾತ್ರ ಕ್ಲಿನಿಕ್‌ಗಳು ಬಾಗಿಲು ಹಾಕಿತ್ತು.
ಕನಕಪುರದಲ್ಲಿ ಒಪಿಡಿ ಬಂದ್ :ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿ, ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿತ್ತು. ಬಾಕಿ ಉಳಿದಂತೆ ತುರ್ತು ಸೇವೆ ಮುಂದುವರೆಸಲಾಗಿತ್ತು. ಜಿಲ್ಲಾಧಿಕಾರಿಗೆ ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ:
ಕೊಲ್ಕತ್ತ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಬಲತ್ಕಾರ ಮತ್ತು ಕೊಲೆಯಂತಹ ಘೋರ ಕೃತ್ಯ ಎಸಗಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವೈದ್ಯರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.