ಸಾರಾಂಶ
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿಯಿಂದ ಯಕ್ಷ ಸಪ್ತೋತ್ಸವ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ಟ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕಲೆಗಳಿಗೆ ದಾಖಲೀಕರಣ ಬಹಳ ಮುಖ್ಯ. ಮುಂದಿನ ಜನಾಂಗಕ್ಕೆ ಇದು ಏನು ಎಂಬುದಾಗಿ ತಿಳಿಯಲು ಇದು ಸಹಕಾರಿಯಾಗಲಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ಸಹ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ಟ ಅಭಿಪ್ರಾಯಪಟ್ಟರು.ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಆಯೋಜಿಸಿದ್ದ ಯಕ್ಷ ಸಪ್ತೋತ್ಸವದಲ್ಲಿ ಮಾತನಾಡಿದರು.
ಆರಾಧನಾ ಕಲೆಯಾದ ಯಕ್ಷಗಾನ ಇಂದು ವಾಣಿಜ್ಯೀಕರಣವಾಗುತ್ತಿದೆ. ದಾಖಲೀಕರಣದಿಂದಾಗಿ ನಮ್ಮ ಹಿಂದಿನ ಕಾಲದಲ್ಲಿ ಯಕ್ಷಗಾನ ಹೇಗಿತ್ತು? ಕಲಾವಿದರು ಹೇಗಿದ್ದರು? ಎಂಬುದನ್ನು ತಿಳಿಯಬಹುದಾಗಿದೆ. ಹಾಗಾಗಿ ಯಕ್ಷಗಾನ ಸಂಸ್ಥೆಗಳು ಯಕ್ಷಗಾನದ ದಾಖಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಐವತ್ತು ವರ್ಷಗಳ ಇತಿಹಾಸವಿರುವ ಕಲಾಕೇಂದ್ರದ ಸಾಧನೆ ಅತ್ಯದ್ಭುತ. ಶ್ರೇಷ್ಠರಿಂದ ಸ್ಥಾಪಿಸಲ್ಪಟ್ಟು ಉಪ್ಪೂರರಿಂದ ತರಬೇತಿ ಪಡೆದ ಶಿಷ್ಯರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಮಹಾ ಸಂಸ್ಥೆಗೆ ತನ್ನ ಶುಭಾಶಯ ತಿಳಿಸಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ರಾಜೇಶ್ ಕಾರಂತ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಮತ್ತು ಪತ್ರಕರ್ತ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.
ಆನಂದ್ ಸಿ. ಕುಂದರ್ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಲಾಕೇಂದ್ರದ ಅಂದಿನ ವಿದ್ಯಾರ್ಥಿ ಕೆ.ಪಿ.ಶೇಖರ್ ವಂದಿಸಿದರು. ಚೇಂಪಿ ದಿನೇಶ್ ಆಚಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಸಭಾ ಕಾರ್ಯಕ್ರಮದ ಮೊದಲು ಮಹಿಳಾ ವೇದಿಕೆ ಸಾಲಿಗ್ರಾಮದಿಂದ ಸಾಂಸ್ಕೃತಿಕ ವೈಭವ ನಂತರ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ಮತ್ತು ರಾಮಚಂದ್ರ ಕೊಂಡದಕುಳಿಯವರ ನಿರ್ದೇಶನದಲ್ಲಿ ಗಾಂಧಾರಿ ಶಾಪ ಎಂಬ ಯಕ್ಷಗಾನ ಪ್ರದರ್ಶನ ನೆರವೇರಿತು.