ದೊಡ್ಡ ಅರಸಿನಕೆರೆ ಜನಸಂಖ್ಯೆ ಹಾಗೂ ವಿಸ್ತೀರ್ಣದ ದೃಷ್ಟಿಯಿಂದ ಪ್ರಮುಖ ಗ್ರಾಮವಾಗಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಈ ಗ್ರಾಮದ ಹಲವು ನಾಯಕರು ವಿವಿಧ ಹುದ್ದೆ ಅಲಂಕರಿಸಿ ಅಧಿಕಾರ ಅನುಭವಿಸಿದ್ದರೂ ಗ್ರಾಮಕ್ಕೆ ಅಗತ್ಯವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವುದು ಬೇಸರ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೊಡ್ಡ ಗ್ರಾಮವಾದ ದೊಡ್ಡ ಅರಸಿನಕೆರೆ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವುದು ಬೇಸರದ ಸಂಗತಿ ಎಂದು ಶಾಸಕ ಕೆ.ಎಂ.ಉದಯ್ ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ದೊಡ್ಡರಸಿನಕೆರೆ ಮತ್ತು ಮುಟ್ಟನಹಳ್ಳಿ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ಹಲವು ಘಟಾನುಘಟಾನಿ ರಾಜಕಾರಣಿಗಳಿದ್ದಾರೆ. ರಾಜಕೀಯವಾಗಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ವಿಷಾದಿಸಿದರು.

ದೊಡ್ಡ ಅರಸಿನಕೆರೆ ಜನಸಂಖ್ಯೆ ಹಾಗೂ ವಿಸ್ತೀರ್ಣದ ದೃಷ್ಟಿಯಿಂದ ಪ್ರಮುಖ ಗ್ರಾಮವಾಗಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಈ ಗ್ರಾಮದ ಹಲವು ನಾಯಕರು ವಿವಿಧ ಹುದ್ದೆ ಅಲಂಕರಿಸಿ ಅಧಿಕಾರ ಅನುಭವಿಸಿದ್ದರೂ ಗ್ರಾಮಕ್ಕೆ ಅಗತ್ಯವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವುದು ಬೇಸರ ಮೂಡಿಸಿದೆ ಎಂದರು.

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ರಸ್ತೆಗಳು, ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಹೀಗಾಗಿ ಅಗತ್ಯಗಳನ್ನು ಗುರುತಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಸೂಳೆಕೆರೆ ಕಾಮಗಾರಿ ಅಸಮಾಧಾನ:

ಸೂಳೆಕೆರೆ ಕೆರೆಯಲ್ಲಿ ಮಣ್ಣು ತೆಗೆದು ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪುವಷ್ಠರಲ್ಲಿ ಕೆರೆಯಲ್ಲಿ ನೀರು ತುಂಬಿತು. ಆದರೆ, ಕಾಮಗಾರಿ ಆರಂಭವಾಗುವ ಮುನ್ನವೇ ಕೆಲವರು ವೀಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಕಾಮಗಾರಿಯ ವಾಸ್ತವ ಸ್ಥಿತಿಯನ್ನು ಅರಿಯದೆ, ಕಾಮಗಾರಿ ಆರಂಭವಾಗುವ ಮುನ್ನವೇ ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಸರಿಯಲ್ಲ.ಕಾಮಗಾರಿಗಳ ಬಗ್ಗೆ ಆಕ್ಷೇಪಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.

ಈ ವೇಳೆ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಮನ್ಮುಲ್ ನಿರ್ದೇಶಕ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ. ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಮೂಲೆ ಹಟ್ಟಿ ಚಂದ್ರಶೇಖರ್, ಡಿ.ಎ.ಕೆರೆ ರಘು, ಮುಖಂಡರಾದ ಪ್ರಸನ್ನ, ಕಿಶೋರ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.