ದೊಡ್ಡಬಳ್ಳಾಪುರದ ತೋಂಟದಾರ್ಯ ಪ್ರೌಢಶಾಲೇಲಿ ಗುರುವಂದನೆ

| Published : Jul 24 2024, 12:24 AM IST

ಸಾರಾಂಶ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಖಾನಿಮಠ ಗ್ರಾಮದ ಶ್ರೀ ತೋಂಟದಾರ್ಯ ಪ್ರೌಢಶಾಲೆಯಲ್ಲಿ 1994- 95ನೇ ಸಾಲಿನ ‌ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

-80-90ರ ದಶಕದಲ್ಲಿ ಅತ್ಯುತ್ತಮ ಪ್ರೌಢಶಾಲೆ ಎಂಬ ಹೆಗ್ಗಳಿಕೆ -ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ

ದೊಡ್ಡಬೆಳವಂಗಲ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಖಾನಿಮಠ ಗ್ರಾಮದ ಶ್ರೀ ತೋಂಟದಾರ್ಯ ಪ್ರೌಢಶಾಲೆಯಲ್ಲಿ 1994- 95ನೇ ಸಾಲಿನ ‌ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಈ ಪ್ರೌಢಶಾಲೆ 80-90ರ ದಶಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (ಈಗಿನ ರಾಮನಗರ ಜಿಲ್ಲೆಯು ಒಳಗೊಂಡಂತೆ) ಅತ್ಯುತ್ತಮ ಪ್ರೌಢಶಾಲೆಯಾಗಿತ್ತು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮತ್ತು ಶೈಕ್ಷಣಿಕ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಉತ್ತಮವಾದ ಹೆಸರು ಗಳಿಸಿದೆ. ಆ ದಿನಗಳಲ್ಲಿ ಶಾಲಾ ಉಪಾಧ್ಯಾಯರ ನಿಸ್ವಾರ್ಥ ಮತ್ತು ಸಮಯದ ಪರಿಮಿತಿ ಇಲ್ಲದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅವರು ತೊಡಗಿಸಿಕೊಂಡ ರೀತಿ ಇತರೆ ಶಾಲೆಗಳಿಗೆ ಮಾದರಿಯಾಗಿತ್ತು. ಪ್ರತಿ ವಿಷಯದ ಶಿಕ್ಷಕರು ಜ್ಞಾನದ ಗಣಿಗಳಂತೆ ಇದ್ದಾರೆ. ವಿಷಯ ಪರಿಣಿತಿ ಹೊಂದಿರುವ ಶಿಕ್ಷಕರ ತಂಡವನ್ನು ಒಳಗೊಂಡ ಶಾಲೆಯಾಗಿತ್ತು. ಅದರ ಪ್ರತಿಫಲ ಫಲಿತಾಂಶ ರೂಪದಲ್ಲಿ ಹೊರಹೊಮ್ಮುತ್ತಿತ್ತು.

ಇಂತಹ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಅತ್ಯುತ್ತಮವಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ತಮ್ಮನ್ನು ತಾವು ಮುಡುಪಾಗಿಟ್ಟ ಶಿಕ್ಷಕರುಗಳನ್ನು ಗೌರವಿಸಲು 1994 -95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನೀಡಿ ಅವರನ್ನು ಸನ್ಮಾನಿಸುವ ಗುರುವಂದನಾ ಕಾರ್ಯಕ್ರಮವನ್ನು ಗುರುಪೂರ್ಣಿಮೆಯ ವಿಶೇಷ ದಿನದಂದು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು.

ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ತಂಡ ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ತಮ್ಮ ಸ್ನೇಹಿತರ ಹಾಗೂ ಗುರುಗಳ ಸಂಪರ್ಕ ಸಾಧಿಸಿ ಅವರೆಲ್ಲರನ್ನೂ ಒಟ್ಟುಗೂಡಿಸಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ.

ಗುರುಗಳ ಹಿರಿಮೆ ಹಾಗೂ ಪಾಠ ಪ್ರವಚನಗಳಲ್ಲಿ ಅವರಿಗಿದ್ದ ವಿಷಯ ಜ್ಞಾನದ ಅಗಾಧತೆಯನ್ನು ಪರಿಚಯಿಸಿದರು. ಅವರ ಪ್ರತಿ ಮಾತು ಹಾಗೂ ಕಲಿಸಿದಂತಹ ಶಿಕ್ಷಣ ಇಂದು ತಾವು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ನಡೆಸಲು ಕಾರಣಿ ಕರ್ತರಾಗಿರುವರೆಂದು ಸ್ಮರಿಸಿರುತ್ತಾರೆ ಎಂದು ಹಿರಿಯ ವಿದ್ಯಾರ್ಥಿಗಳು ಸ್ಮರಿಸಿದರು.

ಅಂದು ತಾವು ಶ್ರಮಪಟ್ಟು ನೀಡಿದ ಶಿಕ್ಷಣ ಇಂದು ತಮ್ಮ ಶಿಷ್ಯರುಗಳ ಶ್ರೇಯೋಭಿವೃದ್ಧಿ ನೋಡಿ ಸಾರ್ಥಕತೆಯ ಭಾವದಿಂದ ಅನಿಸಿಕೆಗಳನ್ನು ಶಿಕ್ಷಕರು ವ್ಯಕ್ತಪಡಿಸಿದರು. ಸುಮಾರು 29 ವರ್ಷಗಳ ನಂತರ ತಮ್ಮನ್ನ ನೆನಪಿಸಿಕೊಂಡು ಈ ಒಂದು ಗುರುಪೂರ್ಣಿಮೆಯ ವಿಶೇಷ ದಿನದಂದು ಕರೆದು ಗೌರವ ನೀಡಿರುವುದನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದೇವೆ. ತಮ್ಮ ಶಿಷ್ಯರ ಗುರುಭಕ್ತಿವಿನಯ ವಿಧೇಯತೆಗಳನ್ನು ನೋಡಿ ಹೃದಯ ತುಂಬಿ ಬಂದು ಇತರರಿಗೂ ಮಾದರಿಯಾಗಲೆಂದು ಹರಸಿ ಆಶೀರ್ವದಿಸಿದರು.