ಸಾರಾಂಶ
ಮಹಾ ರಂಗಪೂಜೆಯಲ್ಲಿ ಕೊಲಕಾಡಿ ವಾರ್ದಿರಾಜ ಉಪಾಧ್ಯಾಯ, ದೇವಿಯ ಧ್ಯಾನ, ಆಕೆಯ ಮಹಿಮೆಯನ್ನು ಭಕ್ತಸಮೂಹದ ಮನಮುಟ್ಟುವಂತೆ ವಿವರಿಸಿ ಬಲಿ ಉತ್ಸವವನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಮಹಾ ರಂಗಪೂಜೆ ಸಹಿತ ಬಲಿ ಉತ್ಸವ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಹೇರೂರು ಆನಂದ ಭಟ್ ಹಾಗೂ ಗಣೇಶ ಸರಳಾಯ ಅವರ ನೇತೃತ್ವದಲ್ಲಿ ನೆರವೇರಿತು.ಸಂಜೆ ಆರಂಭಗೊಂಡ ಮಹಾ ರಂಗಪೂಜೆಯಲ್ಲಿ ಕೊಲಕಾಡಿ ವಾರ್ದಿರಾಜ ಉಪಾಧ್ಯಾಯ, ದೇವಿಯ ಧ್ಯಾನ, ಆಕೆಯ ಮಹಿಮೆಯನ್ನು ಭಕ್ತಸಮೂಹದ ಮನಮುಟ್ಟುವಂತೆ ವಿವರಿಸಿ ಬಲಿ ಉತ್ಸವವನ್ನು ನೆರವೇರಿಸಿದರು.
ಬಲಿ ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ಸ್ವಾತಿ ಆಚಾರ್ಯ, ಯಕ್ಷ ಸುತ್ತನ್ನು ಉಪ್ಪೂರು ಭಾಗ್ಯಲಕ್ಷ್ಮಿ, ಚೆಂಡೆಸುತ್ತು ಬೆಲ್ಕಳೆ ಚಂಡೆ ಬಳಗದವರಿಂದ, ವಿಜಯ ದೇವಾಡಿಗ ಅವರಿಂದ ಶೃಂಗಾರವಾದ್ಯ ಸುತ್ತು ಮುರಳೀಧರ ಮುದ್ರಾಡಿ ಮತ್ತು ಬಳಗದವರಿಂದ ನಾದಸ್ವರ ವಾದನ ಸುತ್ತು ಹಾಗೂ ಪಂಚವಾದ್ಯ ಸುತ್ತು, ಬಳ್ಮಣ್ಣು ವನದುರ್ಗ ಬಳಗದಿಂದ ಪಲ್ಲಕ್ಕಿ ಸುತ್ತು ವಿಶೇಷ ಆಕರ್ಷಣೆಯಾಗಿ ಮೂಡಿಬಂತು.ನಂತರ ನಡದೆ ವಸಂತ ಪೂಜೆಯಲ್ಲಿ ಕೊಲಕಾಡಿ ಶ್ರೀವತ್ಸ ಉಪಾಧ್ಯಾಯ, ಕನ್ನರ್ಪಾಡಿ ಕೃಷ್ಣರಾಜ, ವಾಮನ ಆಚಾರ್ಯ, ನಾಗಶಯನ, ಹೆರ್ಗ ಗಣೇಶ್ ಭಟ್, ಸ್ವಸ್ತಿಕಾಚಾರ್ಯಇವರ ಸಹಯೋಗದೊಂದಿಗೆ ಚತುರ್ವೇದ ಸಹಿತ ವಿವಿಧ ಸ್ತುತಿಗಳನ್ನು ನಡೆಸಿದರು. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ವೈವಿಧ್ಯಮಯ ಹೂವುಗಳಿಂದ ಕ್ಷೇತ್ರದ ಅಲಂಕಾರ ತಜ್ಞ ಆನಂದಬಾಯರಿ ಅಲಂಕರಿಸಿದ್ದರು.
ಕ್ಷೇತ್ರದ ಪ್ರಧಾನ ಅರ್ಚಕ ಅನಿಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು. ಪಳ್ಳಿ ಗುರುರಾಜ ಭಟ್ ದೇವನರ್ತನ ನೆರವೇರಿಸಿದರು. ಭಕ್ತರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಬಲಿ ಉತ್ಸವ ಅಭೂತಪೂರ್ವವಾಗಿ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದರು.