ಸಾರಾಂಶ
ತುಮಕೂರಿನ ಕೊರಟಗೆರೆ ತಾಲೂಕಿನ ತೋವಿನಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮಗಳು ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರಸ್ತೆ ಭಾಗ್ಯ ದೊರೆಯದ ಶಾಪಗ್ರಸ್ತಗೊಂಡಿವೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ/ ತುಮಕೂರು
ತಾಲೂಕಿನ ತೋವಿನಕೆರೆ ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮಗಳು ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರಸ್ತೆ ಭಾಗ್ಯ ದೊರೆಯದ ಶಾಪಗ್ರಸ್ತಗೊಂಡಿವೆ. ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮದಲ್ಲಿ ಓಡಾಡುವುದಕ್ಕೆ ರಸ್ತೆ ಸೌಕರ್ಯವೇ ಇಲ್ಲದೆ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಂಚರಿಸಲು ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ. ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಈ ಎರಡು ಗ್ರಾಮದಲ್ಲಿ ಸುಮಾರು 90 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಸರ್ಕಾರ ಮಾಡುವುದಾಗಿ ಜನಪ್ರತಿನಿಧಿಗಳು ಭಾಷಣ ಬಿಗಿಯುತ್ತಲೆ ಇರುತ್ತಾರೆ. ಆದರೆ ಸ್ವಾತಂತ್ರ÷್ಯ ಬಂದು 78 ವರ್ಷಗಳು ಕಳೆದರೂ ಇಂದಿಗೂ ಈ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ.ಇಲ್ಲಿನ ಜನರಿಗೆ ಸಂಚರಿಸಲು ಸರಿಯಾದ ರಸ್ತೆಯಿಲ್ಲ. ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರು ದವಾಖಾನೆಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂದರೆ ಕೆಸರುಮಯ ರಸ್ತೆಗಳು: ಮಳೆ ಬಂದರೆ ಕೆಸರು ಮಯವಾಗುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಇಂತಹ ರಸ್ತೆಯಲ್ಲೇ ಜನರು ಎದ್ದು ಬಿದ್ದು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೊರಟರೆ ರೈತರು ರಸ್ತೆಯಲ್ಲಿ ನಡೆಯಲಾಗದೆ ಜಮೀನು ಬದುಗಳ ಮೇಲೆ ಹೋಗುತ್ತಿದ್ದಾರೆ.ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರೆಲ್ಲ ನಾಲ್ಕೈದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತೋವಿನಕೆರೆ ಗ್ರಾಮ ಪಂಚಾಯ್ತಿ ತೆರಿಗೆ ಮಾತ್ರ ಕಾಲಕಾಲಕ್ಕೆ ವಸೂಲಿ ಮಾಡುತ್ತಿದೆ. ಆದರೆ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆ ತೆರಿಗೆ ಹಣ ಬಳಕೆಯಾಗುತ್ತಿಲ್ಲ. ಗ್ರಾಪಂ ಆಡಳಿತ ಯಂತ್ರವಂತೂ ಕೆಟ್ಟು ಹೋಗಿದೆ. ಗ್ರಾಮಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸದಿದ್ದ ಮೇಲೆ ಇಲ್ಲಿಗೆ ಗ್ರಾಪಂ ಅವಶ್ಯಕವೇನಿದೆ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸಚಿವರಾಗಲೀ, ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕೂಡಲೇ ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಬೇಕು, ಇಲ್ಲದಿದ್ದರೆ ಈ ಎರಡೂ ಗ್ರಾಮಗಳ ಗ್ರಾಮಸ್ಥರು ರಸ್ತೆ ದುರಸ್ಥಿಗಾಗಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದಾರೆ.