- ₹8 ಲಕ್ಷ ವೆಚ್ಚದ ಮೂರ್ತಿ, 6 ತಿಂಗಳೊಳಗೆ ಸಿದ್ಧಪಡಿಸುವ ಭರವಸೆ

- - -

ನ್ಯಾಮತಿ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ₹1.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಶ್ರೀ ಆಂಜನೇಯ ಸ್ವಾಮಿ ಮೂರ್ತಿಯನ್ನು ನಿರ್ಮಿಸಲು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಬಾಲರಾಮನನ್ನು ಕೆತ್ತಿದ್ದ ಮೈಸೂರಿನ ಹೆಸರಾಂತ ಶಿಲ್ಪಿ ಅರುಣ್‌ ಯೋಗಿರಾಜ್‌ ಒಪ್ಪಿಕೊಂಡಿದ್ದಾರೆ ಎಂದು ಜಿ.ಪಂ. ಮಾಜಿ ಸದಸ್ಯ ಹಾಗೂ ಡಿಡಿಸಿಸಿ ಬ್ಯಾಂಕ್‌ ನಿರ್ದೇಶಕ ದೊಡ್ಡೇರಿ ಡಿ.ಜಿ.ವಿಶ್ವನಾಥ್‌ ಹೇಳಿದರು.

ದೊಡ್ಡೇರಿ ಗ್ರಾಮದ ಮುಖಂಡರೊಂದಿಗೆ ಮೈಸೂರಿನ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರನ್ನು ಭೇಟಿ ಮಾಡಿ ಗ್ರಾಮಸ್ಥರ ಒತ್ತಾಸೆಯಂತೆ ಶ್ರೀ ಆಂಜನೇಯಸ್ವಾಮಿ ಮೂರ್ತಿಯನ್ನು ಕೆತ್ತಲು ಅವರನ್ನು ಒಪ್ಪಿಸಲಾಯಿತು. ಬಳಿಕ ಮುಂಗಡ ಹಣವನ್ನು ನೀಡಲಾಯಿತು ಎಂದರು.

ದೊಡ್ಡೇರಿ ಗ್ರಾಮದಲ್ಲಿ ₹1.25 ಕೋಟಿ ವೆಚ್ಚದಲ್ಲಿ ನೂತನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸಿದ್ಧಗೊಂಡಿದೆ. 6 ತಿಂಗಳ ಅಂತರದಲ್ಲಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಗ್ರಾಮದ ಆಂಜನೇಯ ಸ್ವಾಮಿ ಮೂರ್ತಿಯನ್ನು ಸಿದ್ಧಪಡಿಸಿ ಗ್ರಾಮಕ್ಕೆ ಒಪ್ಪಿಸುತ್ತೇನೆಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಭರವಸೆ ನೀಡಿದ್ದಾರೆ. ಮೂರ್ತಿಯು ಸಿದ್ಧಗೊಳಿಸುತ್ತಿದ್ದಂತೆ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಹರಗುರು ಚರ ಮೂರ್ತಿಗಳು, ರಾಜಕೀಯ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅದ್ಧೂರಿಯಾಗಿ ನೂತನ ದೇವಸ್ಥಾನ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಚೀಲೂರಿನ ವಿಎಸ್‌ಎಸ್‌ಎನ್‌ ಬ್ಯಾಂಕ್‌ ನಿರ್ದೇಶಕ ನಾಗರಾಜಪ್ಪ, ಗ್ರಾ.ಪಂ. ಸದಸ್ಯ ಸತೀಶ್‌, ದೊಡ್ಡೇರಿ ಡಿಎನ್‌. ಗಿರೀಶ್‌, ಡಿ.ಸಿ. ಬಸವನಗೌಡ, ಡಿ.ಪಿ. ಚನ್ನೇಶ್‌, ಗಡೇಕಟ್ಟೆ ವೀರೇಶ್‌, ಮೌನೇಶಾಚಾರ್‌ ಮತ್ತಿತರರಿದ್ದರು.

- - -

-ಚಿತ್ರ:

ದೊಡ್ಡೇರಿ ಗ್ರಾಮದ ಮುಖಂಡರು ಮೈಸೂರಿನ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರನ್ನು ಭೇಟಿಯಾಗಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿ, ಮುಂಗಡ ಹಣ ಒಪ್ಪಿಸಿದರು.