ಮಂಜುನಾಥ ಕೆ.ಎಂ.
ಬಳ್ಳಾರಿ: ಬಿಸಿಲೂರು ಖ್ಯಾತಿಯ ಅಖಂಡ ಬಳ್ಳಾರಿಯಲ್ಲೀಗ ಪ್ರಖರ ಬಿಸಿಲಿನದ್ದೇ ಮಾತು. ದಿನದಿನಕ್ಕೆ ಬೇಸಿಗೆಯ ಬಿಸಿ ಗಣಿನಾಡಿನ ಜನರನ್ನು ಬಾಧಿಸಲಾರಂಭಿಸಿದೆ. ಅದರಲ್ಲೂ ಕುಡಿವ ನೀರಿನ ಸಮಸ್ಯೆಗೆ ಜನ-ಜಾನುವಾರುಗಳು ಒದ್ದಾಟ ಶುರುಗೊಳ್ಳುವ ಎಲ್ಲ ಲಕ್ಷಣಗಳಿವೆ. ಅಖಂಡ ಜಿಲ್ಲೆಯ ಜಿಲ್ಲಾಡಳಿತಗಳ ಪೂರಕ ಕ್ರಮಗಳ ನಡುವೆಯೂ ನೀರಿನ ಸಮಸ್ಯೆಯ ಉಲ್ಬಣದ ಛಾಯೆ ಮೂಡಿದೆ.ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್ ಅಳವಡಿಕೆಯಿಂದಾಗಿ ರೈತರಿಗೆ ಬೇಸಿಗೆ ಬೆಳೆಗೆ ನೀರು ಕೊಡಲಿಲ್ಲ. ಹೀಗಾಗಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಕುಡಿವ ನೀರಿಗೆ ಅಭಾವ ಬರುವ ಸಾಧ್ಯತೆಯಿಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟೋಕ್ತಿ. ಆದರೆ, ಪರಿಸ್ಥಿತಿ ಹಾಗಿಲ್ಲ. ಕುಡಿವ ನೀರಿನ ಸಮಸ್ಯೆ ಈಗಾಗಲೇ ಜಿಲ್ಲೆಯಲ್ಲಿ ತಲೆದೋರಿದೆ. ಕಡು ಬೇಸಿಗೆಯಿಂದ ಜಲಮೂಲಗಳು ಬತ್ತುತ್ತಿರುವುದರಿಂದ ನೀರಿಗಾಗಿ ಜನ-ಜಾನುವಾರುಗಳ ಪರದಾಟ ಶುರುವಾಗಿದೆ.
ಏತನ್ಮಧ್ಯೆ, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳ ದುರಸ್ತೀಕರಣದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡರೆ ಮಾತ್ರ ಕಾಲುವೆಯಿಂದ ನೀರು ಪಡೆದುಕೊಂಡು ಬಳ್ಳಾರಿ ನಗರ ಹಾಗೂ ಇತರೆ ಗ್ರಾಮೀಣ ಪ್ರದೇಶಗಳಿಗೆ ಪೂರೈಕೆಗೆ ಸಾಧ್ಯವಿದೆ. ಆದರೆ, ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಹೇಳಿಕೆ ಪ್ರಕಾರ ಕಾಲುವೆಗಳ ಕಾಮಗಾರಿ ಏಪ್ರಿಲ್ ಎರಡನೇ ವಾರದವರೆಗೆ ಮುಂದುವರಿಯಲಿದೆ.ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಪಾಲಿನ ಕುಡಿವ ನೀರು ಪೂರೈಕೆ ಮಾಡಬೇಕಾಗಿರುವುದರಿಂದ ಏಪ್ರಿಲ್ ಕೊನೆಯ ವಾರದೊಳಗೆ ಕಾಲುವೆಯಲ್ಲಿ ನೀರು ಹರಿಯುವ ಸಾಧ್ಯತೆಯಿದೆ. ಕಾಲುವೆಗೆ ನೀರು ಪೂರೈಕೆ ವಿಳಂಬವಾದರೆ ನೀರಿನ ಸಮಸ್ಯೆ ತೀವ್ರಗೊಳ್ಳುವ ಆತಂಕವಿದೆ.
ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ನೀರಿಗಾಗಿ ಜನರ ಪರದಾಟ ಹೆಚ್ಚಾಗಿದೆ. ನೀರಿಗಾಗಿ ಕಿ.ಮೀ.ಗಟ್ಟಲೇ ಸೈಕಲ್‌ಗಳಲ್ಲಿ ತೆರಳುವ ದೃಶ್ಯಗಳು ಸಾಮಾನ್ಯ. ಬಾವಿಗಳು ಬತ್ತುತ್ತಿರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಕೆ ಹೇಗೆ ಎಂಬ ಆತಂಕ ಎದುರಾಗಿದೆ.
10 ದಿನಕ್ಕೊಮ್ಮೆ ನೀರು: ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ಬಳ್ಳಾರಿ ಜನರಿಗೆ 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ವೇಳೆ 85 ಎಂಎಲ್‌ಡಿ ನೀರು ಸರಬರಾಜು ಆಗುತ್ತಿತ್ತು. ಆದರೆ, ಇದೀಗ 65ಎಂಎಲ್‌ಡಿ ಇಳಿಕೆ ಮಾಡಿದ್ದರಿಂದಾಗಿ ಕಳೆದ 15 ದಿನಗಳಿಂದ ನಗರದ ಜನರಿಗೆ 10 ದಿನಕ್ಕೊಮ್ಮೆ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆಯ ನಿರ್ಧಾರ ಪಡೆದುಕೊಳ್ಳಲಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದೆ ನಿಜ. ಆದರೆ, ವಾರಕ್ಕೊಮ್ಮೆ ನೀರು ಪೂರೈಸಿದರೆ ಮುಂದೆ ನೀರಿನ ಕೊರತೆ ಎದುರಾದರೆ ಹೇಗೆ? ಒಂದು ವೇಳೆ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ಆಂಧ್ರ ಕೋಟಾದ ನೀರು ಬಿಟ್ಟರೆ, ಕುಡಿವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಕಾಮಗಾರಿ ತೀರಾ ವಿಳಂಬವಾದರೆ ಹೇಗೆ ? ಎಂಬ ಆತಂಕವಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಅಲ್ಲೀಪುರ ಕೆರೆ 12,633 ಮಿಲಿಯನ್ ಲೀಟರ್ ನೀರಿನ ಸಾಮರ್ಥ್ಯ ಹೊಂದಿದ್ದು, ಸದ್ಯ 8055 ಎಂಎಲ್‌ಡಿ ನೀರಿದೆ. ಶಿವಪುರ ಹಾಗೂ ಮೋಕಾ ಕೆರೆಯಲ್ಲಿ ಕ್ರಮವಾಗಿ 710 ಎಂಎಂಲ್‌ಡಿ ಹಾಗೂ 800 ಎಂಎಲ್‌ಡಿ ನೀರಿದೆ. ನೀರಿನ ಸಮಸ್ಯೆ ತಗ್ಗಿಸಲು ಬೇರೆ ಜಲಮೂಲಗಳತ್ತ ಮಹಾನಗರ ಪಾಲಿಕೆ ಮೊರೆ ಹೋಗಿದೆ. ಬಳ್ಳಾರಿ ನಗರದಲ್ಲಿರುವ 520 ಬೋರ್‌ವೆಲ್‌ಗಳು, 120 ಹ್ಯಾಂಡ್ ಪಂಪ್‌ಗಳ ದುರಸ್ತೀಕರಣಗೊಳಿಸಿ ನಿರ್ವಹಣೆಗೆ ಕ್ರಮ ವಹಿಸಿದೆ. ನಗರದಲ್ಲಿರುವ 20 ಬಾವಿಗಳ ಪೈಕಿ 4 ಮಾತ್ರ ಜನ ಬಳಕೆಯಾಗುತ್ತಿದೆ. ಉಳಿದವುಗಳ ದುರಸ್ತಿಗೊಳಿಸುವತ್ತ ಪಾಲಿಕೆ ಗಮನ ಹರಿಸಬೇಕಾಗಿದೆ.ಖಾಸಗಿ ಟ್ಯಾಂಕರ್ ಮೊರೆ: ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಹೋಟೆಲ್, ಲಾಡ್ಜ್, ಆಸ್ಪತ್ರೆ ಸೇರಿದಂತೆ ನಾನಾ ಕಡೆ ಟ್ಯಾಂಕರ್ ಗಳ ನೀರು ಬಳಕೆ ಮಾಡಲಾಗುತ್ತಿದೆ. ವಾಣಿಜ್ಯ ಚಟುವಟಿಕೆಗಳಿಗೆ ಪಾಲಿಕೆ ಪೂರೈಕೆ ಮಾಡುವ ನೀರು ಸಾಕಾಗುತ್ತಿಲ್ಲ. ದುಬಾರಿಯಾದರೂ ಟ್ಯಾಂಕರ್ ನೀರು ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಹೋಟೆಲ್ ಮಾಲೀಕರು.
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ಇನ್ನು ಶುರುವಾಗಿಲ್ಲ. ನೀರಿನ ಅಭಾವ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯಾತ್ಮಕ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಚರಂಡಿ ನೀರು ಮಿಶ್ರಿತ: ನಗರದಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗುತ್ತಿದೆ. ಪಾಲಿಕೆ ಆಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಅನೇಕ ಹೋರಾಟಗಳು ನಡೆದಿವೆ. ಕಲುಷಿತ ನೀರು ನಿಯಂತ್ರಣಕ್ಕೆ ಪಾಲಿಕೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿದೆ. 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವಾಗಲಾದರೂ ನೀರು ಶುದ್ಧೀಕರಣಕ್ಕೆ ಗಮನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಳ್ಳಾರಿ 83 ಸಮಸ್ಯಾತ್ಮಕ ಹಳ್ಳಿ: ಬಳ್ಳಾರಿ ಜಿಲ್ಲೆಯ 5 ತಾಲೂಕುಗಳ 83 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಜಿಲ್ಲಾಡಳಿತ ಗುರುತಿಸಿದೆ. ಈ ಪೈಕಿ ಬಳ್ಳಾರಿ 21, ಕುರುಗೋಡು 15, ಸಿರುಗುಪ್ಪ 28, ಕಂಪ್ಲಿ 16 ಹಾಗೂ ಸಂಡೂರು ತಾಲೂಕಿನ 3 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ನೀರಿನ ಕೊರತೆ ನೀಗಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಕನ್ನಡಪ್ರಭಕ್ಕೆ ತಿಳಿಸಿದರು.ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮ ವಹಿಸಿದ್ದೇವೆ. ಇದರಿಂದ ಶೇ.10ರಷ್ಟು ನೀರು ಉಳಿಕೆಯಾಗಲಿದೆ. ಸ್ವಿಮ್ಮಿಂಗ್ ಪೂಲ್, ಹೋಟೆಲ್, ಬಾರ್ ಮತ್ತಿತರ ಕಡೆಗಳಿಗೆ ಹೆಚ್ಚುವರಿಯಾಗಿ ನೀರು ಪೂರೈಕೆ ನಿಯಂತ್ರಿಸಲಾಗಿದೆ. ಸಾರ್ವಜನಿಕರು ವಿನಾಕಾರಣ ನೀರು ವ್ಯರ್ಥ ಮಾಡದೇ ಮಿತವಾಗಿ ಬಳಸುವಂತಾಗಬೇಕು ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ.
ಮಹಾನಗರಕ್ಕೆ ನೀರು ಪೂರೈಕೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಂಡಿದೆ. ಕುಡಿವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬೇಕಾದಷ್ಟು ನೀರಿನ ಸಂಗ್ರಹವಿದೆ. ಏಪ್ರಿಲ್ 10ರೊಳಗೆ ಕಾಲುವೆ ನೀರು ಬಿಡುವಂತೆ ತುಂಗಭದ್ರಾ ಬೋರ್ಡ್ ಗೆ ಮನವಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ.