ಬಳ್ಳಾರಿ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಿಲ್ಲೆಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು ಹೋಟೆಲ್ ಉದ್ಯಮ ತತ್ತರಿಸಿ ಹೋಗಿದೆ.
ಕೆಲವು ಹೋಟೆಲ್‌ಗಳು ಮೆನು ಬದಲಾಯಿಸಿಕೊಂಡಿವೆ. ಬೇಕರಿ, ವಸತಿ ನಿಲಯಗಳು ಸೇರಿದಂತೆ ಸಿಲಿಂಡರ್ ಬಳಕೆಯ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಾರಂಭಿಸಿವೆ. ಕೆಲವು ಹೋಟೆಲ್‌ಗಳು ಅನಿವಾರ್ಯವಾಗಿ ಕಟ್ಟಿಗೆಯ ಒಲೆಗಳಿಗೆ ಮೊರೆ ಹೋಗಿದ್ದಾರೆ. ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ಸಣ್ಣಪುಟ್ಟ ಹೋಟೆಲ್ ವ್ಯಾಪಾರಿಗಳು ಬಂದ್ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಗ್ಯಾಸ್ ಏಜೆನ್ಸಿಯವರು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಸಿಲಿಂಡರ್‌ಗಳ ಅಭಾವದಿಂದ ತೀವ್ರ ಸಮಸ್ಯೆಯಾಗಿದ್ದು, ಹೋಟೆಲ್‌ಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬೇಕರಿ ಪದಾರ್ಥಗಳ ತಯಾರಿಕೆಯನ್ನು ಸಹ ನಿರ್ದಿಷ್ಟಗೊಳಿಸಿಕೊಳ್ಳಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಬೇಕರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಕನ್ನಡಪ್ರಭಕ್ಕೆ ತಿಳಿಸಿದರು.ಬಹುತೇಕ ಹೋಟೆಲ್, ಬೇಕರಿ ಉದ್ಯಮ ಸಿಲಿಂಡರ್‌ಗಳ ಮೇಲೆಯೇ ಅವಲಂಬಿತವಾಗಿದೆ. ಅಮೆರಿಕ-ಇರಾನ್ ಯುದ್ಧದಿಂದಾಗಿ ನಾವೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಹೋಟೆಲ್, ಬೇಕರಿ ಉದ್ಯಮವನ್ನೇ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಹರೀಶ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ಗ್ಯಾಸ್ ಸಿಲಿಂಡರ್‌ಗಳ ಅಂಗಡಿಗಳ ಮುಂದೆ ನೋ ಸ್ಟಾಕ್ ಬೋರ್ಡ್‌ಗಳನ್ನು ಹಾಕಲಾಗಿದೆ. ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟ ಮತ್ತು ಅಕ್ರಮ ದಾಸ್ತಾನು ಆಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.