ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಕುಕ್ಕಿಕಟ್ಟೆ ವೇದಮೂರ್ತಿ ರಾಘವೇಂದ್ರ ತಂತ್ರಿ ಪ್ರಧಾನತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.ಕ್ಷೇತ್ರದಲ್ಲಿ ಬೆಳಗ್ಗೆ ದೇವತಾ ಪ್ರಾರ್ಥನೆ, ನಂತರ ಶಾಸ್ತ್ರೋಕ್ತವಾದ ಅರಣಿಮಥನದಿಂದ ಅಗ್ನಿ ಜನನಗೊಳಿಸಿ ಆದ್ಯ ಗಣಪತಿಯಾಗ ನೆರವೇರಿಸಲಾಯಿತು. ಶ್ರೀ ಚಕ್ರಮಂಡಲ ಪೂಜೆಗೆ ವಿಶೇಷವಾಗಿ ರಚಿಸಲಾದ ಪುಷ್ಪಾಲಂಕೃತ ಮಂಟಪದೊಳಗೆ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ, ಪಂಚವರ್ಣಾತ್ಮಕವಾಗಿ ಬಿಂದುವನ್ನು ಇಟ್ಟು ಶ್ರೀ ಚಕ್ರಮಂಡಲ ರಚನೆಗೆ ಚಾಲನೆ ನೀಡಿದರು.ಸಂಜೆ 6 ಗಂಟೆಯಿಂದ ಶ್ರೀ ಚಕ್ರಮಂಡಲ ಪೂಜೆ ಆರಂಭಗೊಂಡಿತು. ಪೂಜೆಯಲ್ಲಿ ಪುಷ್ಪಾರ್ಚನೆಗೆ ವಿಶೇಷ ಪ್ರಾಧಾನ್ಯತೆ ಇದ್ದು, ಸುಗಂಧಭರಿತ ವಿಧವಿಧದ ಪುಷ್ಪಗಳಿಂದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿಯಾದ ಶ್ರೀ ರಾಜರಾಜೇಶ್ವರಿಯನ್ನು ಲಲಿತಾ ಸಹಸ್ರನಾಮ ಸಹಿತ ವಿಧವಿಧವಾಗಿ ಸ್ತುತಿಸಿ ಅರ್ಚನೆ ನೆರವೇರಿಸಲಾಯಿತು.ಶಾಸ್ತ್ರಗಳು ಉಲ್ಲೇಖಿಸಿದಂತೆ ವಿಶೇಷವಾಗಿ ನವನೈವೇದ್ಯಗಳನ್ನು ಆಕೆಗೆ ಸಮರ್ಪಿಸಿ ಷೋಡಸ ಆರತಿಯನ್ನು ಬೆಳಗಿಸಿ ಚೆಂಡೆವಾದ್ಯ ನಾದದೊಂದಿಗೆ ಅಷ್ಟಾವಧಾನ ಸಹಿತವಾಗಿ ಆರಾಧಿಸಲಾಯಿತು.ವಿಶೇಷವಾಗಿ ಸಮರ್ಥಿಸಲ್ಪಡುವ ಅಷ್ಟಾವಧಾನ ಸೇವೆಯಲ್ಲಿ ಸಂಗೀತ ಸೇವೆಯನ್ನು ಚಂದ್ರಕಲಾ ಶರ್ಮ, ಯಕ್ಷಗಾನ ಸೇವೆಯನ್ನು ಊರು ಭಾಗ್ಯಲಕ್ಷ್ಮಿ, ಪಂಚವಾದ್ಯ ಸಹಿತ ರುದ್ರನಾದ ಸೇವೆಯನ್ನು ನಾಗೇಂದ್ರ ಕುಡುಪು, ನಾದಸ್ವರ ವಾದನ ಸೇವೆ ಮುರಳಿಧರ ಮುದ್ರಾಡಿ ಮತ್ತು ತಂಡದವರು, ನೃತ್ಯ ಸೇವೆಯನ್ನು ವಿದುಷಿ ಅನ್ವಿತಾ ಹಾಗೂ ಚತುರ್ವೇದ ಸಹಿತ ವಿವಿಧ ಸೇವೆಯನ್ನು ವಿಪ್ರೊತ್ತಮರು ನೆರವೇರಿಸಿದರು.ಪೂಜೆಯ ಅಂಗವಾಗಿ ಸುವಾಸಿನಿ ಆರಾಧನೆ, ಕನ್ನಿಕರಾಧನೆ, ಬ್ರಹ್ಮಚಾರಿ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆಗಳು ಸಂಪನ್ನಗೊಂಡು ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಮೃಷ್ಟಾನ್ನ ಸಂತರ್ಪಣೆ ನೆರವೇರಿತು.ಇಹದಲ್ಲಿ ಸುಖ ಪರದಲ್ಲಿ ಮೋಕ್ಷವನ್ನು ಕರುಣಿಸುವಂತಹ ಬಹುವಿಶಿಷ್ಟವೂ ಅಪರೂಪವು ಬಹು ಫಲಪ್ರದವು ಆದಂತಹ ಈ ಶ್ರೀ ಚಕ್ರಮಂಡಲ ಪೂಜೆಯು ಚೆನ್ನೈನ ವಾಸುದೇವನ್ ಮತ್ತು ಕುಟುಂಬಸ್ಥರ ಪರವಾಗಿ ಪ್ರಾಯಶ್ಚಿತ್ತ ಪೂರ್ವಕವಾಗಿ, ನೋಡುಗರನ್ನು ಭಕ್ತಿ ಪರವಶಗೊಳಿಸಿ ರೋಮಾಂಚನಗೊಳ್ಳುವಂತೆ ಸಂಪನ್ನಗೊಂಡಿತು. ಈ ವಿಶೇಷ ಪೂಜೆಯ ಸಂಪೂರ್ಣ ನೇತೃತ್ವವನ್ನು ವೇದಮೂರ್ತಿ ವಿಖ್ಯಾತ್ ಭಟ್ ವಹಿಸಿದ್ದರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
;Resize=(128,128))
;Resize=(128,128))
;Resize=(128,128))