ಸಾರಾಂಶ
ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ದುರ್ಗಾಷ್ಟಮಿಯ ಪರ್ವಕಾಲದಲ್ಲಿ ಶ್ರೀ ಕ್ಷೇತ್ರಕ್ಕೆ ಹರಕೆಯ ರೂಪದಲ್ಲಿ ದೇವಿಯ ಭಕ್ತಾಭಿಮಾನಿಗಳು ಚಿನ್ನದ ತ್ರಿಶೂಲವನ್ನು ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತಿದೆ.ಗುರುವಾರ ದುರ್ಗಾಷ್ಟಮಿಯ ಪರ್ವಕಾಲದಲ್ಲಿ ಶ್ರೀ ಕ್ಷೇತ್ರಕ್ಕೆ ಹರಕೆಯ ರೂಪದಲ್ಲಿ ದೇವಿಯ ಭಕ್ತಾಭಿಮಾನಿಗಳು ಚಿನ್ನದ ತ್ರಿಶೂಲವನ್ನು ಸಮರ್ಪಿಸಿದರು.ಈ ದಿನ ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್ - ನಾಗರಾಜ ದಂಪತಿ ಹಾಗೂ ರಾಜೇಂದ್ರ ಪ್ರಸಾದ್ - ಪ್ರೇಮ ರಾಜೇಂದ್ರ ಪ್ರಸಾದ್ ದಂಪತಿ ಪರವಾಗಿ ಜೋಡಿ ಚಂಡಿಕಾಯಾಗ ಸಮರ್ಪಣೆಗೊಂಡವು.
ಮಧ್ಯಾಹ್ನ ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಹಾಗೂ ಶ್ರೀ ಮಾತಾ ಭಜನಾ ಮಂಡಳಿಯ ಭಜಕರಿಂದ ಭಜನೆ ಸಂಕೀರ್ತನೆ, ವಿದುಷಿ ಶ್ರಾವ್ಯ ಮತ್ತು ಬಳಗದವರಿಂದ ನೃತ್ಯ ವೈವಿಧ್ಯ, ರಾತ್ರಿ ರಂಗಪೂಜೆ ಸಹಿತ ಕಲ್ಪೋಕ್ಷ ಪೂಜೆ, ವಿದುಷಿ ಶಾಂಭವಿ ಅವರ ಶಿಷ್ಯೆಯರಿಂದ ನೃತ್ಯ ಸೇವೆ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.ಅ.11 (ಶುಕ್ರವಾರ)ರಂದು ನವಮಿಯ ಪರ್ವಕಾಲದಲ್ಲಿ ಗಾಯತ್ರಿ ಜಪ ಅನುಷ್ಟಾನಕರಾದ ಶ್ರೀ ರಮಾನಂದ ಗುರೂಜಿ ಅವರ ಪರವಾಗಿ ಗಾಯತ್ರಿ ಮಹಾಮಂತ್ರ ಯಾಗವು ಸಂಪನ್ನಗೊಳ್ಳಲಿದೆ. ಮುಂದೆ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಪಂಚಮುಖಿ ಗಾಯತ್ರಿ ಮಹಾ ಮಾತೆಯ ಪ್ರತಿಷ್ಠಾ ಪೂರ್ವಭಾವಿಯಾಗಿ ಈ ಯಾಗ ಸಂಪನ್ನಗೊಳ್ಳಲಿದೆ.ಅಲ್ಲದೇ ಶ್ರೀ ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ಗುಜರಾತಿನ ಭಕ್ತಾಭಿಮಾನಿ ಬಳಗದವರು ದಾಂಡಿಯ- ಗರ್ಬ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಸ್ಥಳೀಯ ಆಸಕ್ತರು ಕೂಡ ಇದರಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.