ಬಿಜೆಪಿಗೆ ಮತ ಕೇಳುವ ನೈತಿಕತೆ ಇದೆಯೇ?: ಕಿಮ್ಮನೆ ರತ್ನಾಕರ್‌

| Published : Apr 12 2024, 01:01 AM IST

ಬಿಜೆಪಿಗೆ ಮತ ಕೇಳುವ ನೈತಿಕತೆ ಇದೆಯೇ?: ಕಿಮ್ಮನೆ ರತ್ನಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ನೆರೆಗೂ ಹಣ ನೀಡಲಿಲ್ಲ, ಬರಕ್ಕೂ ಹಣ ನೀಡಲಿಲ್ಲ. ರಾಜ್ಯದ ಬಿಜೆಪಿಯ 27 ಸಂಸದರು ಕೂಡ ಇದರ ಬಗ್ಗೆ ತುಟಿಕ್‍ಪಿಟಿಕ್ ಎನ್ನಲಿಲ್ಲ ಈಗ ಮತ ಕೇಳಲು ರಾಜ್ಯಕ್ಕೆ ಬರುತ್ತಿದ್ದಾರೆ. ಇವರಿಗೆ ಮತ ಕೇಳುವ ನೈತಿಕ ಹಕ್ಕು ಎಲ್ಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬರಗಾಲ ಇದ್ದಾಗ ಪರಿಹಾರ ಕೊಡಲಿಲ್ಲ. ತೆರಿಗೆ ಹಣದಲ್ಲಿ ರಾಜ್ಯದ ಪಾಲು ಸಿಗಲಿಲ್ಲ. ಅಕ್ಕಿ ಕೊಡಿ ಎಂದರೆ ಕೊಡದೆ ಕಲ್ಲು ಹೃದಯದವರಂತೆ ವರ್ತಿಸಿದ ಬಿಜೆಪಿ ನಾಯಕರು ಈಗ ಮತ ಕೇಳಲು ರಾಜ್ಯಕ್ಕೆ ಬರುತ್ತಿದ್ದಾರೆ. ಇವರಿಗೆ ಮತ ಕೇಳುವ ನೈತಿಕ ಹಕ್ಕು ಎಲ್ಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕಿಡಿಕಾರಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ನೆರೆಗೂ ಹಣ ನೀಡಲಿಲ್ಲ, ಬರಕ್ಕೂ ಹಣ ನೀಡಲಿಲ್ಲ. ರಾಜ್ಯದ ಬಿಜೆಪಿಯ 27 ಸಂಸದರು ಕೂಡ ಇದರ ಬಗ್ಗೆ ತುಟಿಕ್‍ಪಿಟಿಕ್ ಎನ್ನಲಿಲ್ಲ. ಈಗ ಬರಗಾಲ ತಂಡವಾಡುತ್ತಿದೆ. ಪ್ರಾಣಿ-ಪಕ್ಷಿ ಜನರಿಗೂ ನೀಡಿಲ್ಲ. ಇಂತಹ ಸಂದರ್ಭದಲ್ಲಾದರೂ ನೆರವು ನೀಡಬಹುದಿತ್ತು. ಅದೂ ಮಾಡಲಿಲ್ಲ. ರಾಜ್ಯ ಸರ್ಕಾರ ಹಣ ಕೊಡುತ್ತೇವೆ ಅಕ್ಕಿ ಕೊಡಿ ಎಂದು ಕೇಳಿದಾಗ ಅಕ್ಕಿ ಇಲ್ಲ ಎಂದ ಬಿಜೆಪಿಯವರು ಈಗ 29 ರು.ಗೆ 1 ಕೆ.ಜಿ.ಯಂತೆ ಅವರೇ ಅಕ್ಕಿಯನ್ನು ಮಾರುತ್ತಿದ್ದಾರೆ ಎಂದು ಆರೋಪಿಸಿದರು.

ಧರ್ಮದ ವಿಷಯಗಳನ್ನು ಮುನ್ನಡೆಗೆ ತಂದು ಬಹುಸಂಖ್ಯಾತರ ಮತ ಗಳಿಸುವ ಬಿಜೆಪಿಯ ಹುನ್ನಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆಯು ವುದಿಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖಂಡರು ಜಾತಿ, ಧರ್ಮ ಮತ್ತು ಅಲ್ಪಸಂಖ್ಯಾತರ ಧರ್ಮದ ವಿಷಯಗಳನ್ನೇ ಕೆದುಕುತ್ತ ಈ ದೇಶದ ಜನರ ನೆಮ್ಮದಿ ಯನ್ನು ಹಾಳು ಮಾಡಿದ್ದಾರೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.ಕೇಂದ್ರ ಸರ್ಕಾರ ತನ್ನ ಆರ್ಥಿಕ ನೀತಿಯನ್ನೇ ಬದಲಾಯಿಸಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ಬರಬೇಕಾದ 1 ಲಕ್ಷ 87 ಸಾವಿರ ಕೋಟಿ ರು.ಗಳನ್ನು ನೀಡದೇ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್‍ಗೆ ಹೋಗಿ ನ್ಯಾಯ ಕೇಳಬೇಕಾದ ಸ್ಥಿತಿ ಬಂದೊದಗಿದೆ ಎಂದು ಹರಿಹಾಯ್ದರು.

ಗ್ಯಾರೆಂಟಿ ಕೊಟ್ಟಿಲ್ಲ ಎಂದರೆ ಪಟ್ಟಿ ಕೊಡಿ: ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಗ್ಯಾರಂಟಿ ಬೇಡ ಎನ್ನುವವರು ನಮಗೆ ಗ್ಯಾರಂಟಿಗಳು ಬೇಡ ಎಂದು ಸರ್ಕಾರಕ್ಕೆ ವಾಪಾಸು ಕೊಡಲಿ, ಅದು ಕೊನೆ ಪಕ್ಷ ಬಡವರಿಗಾದರೂ ತಲುಪುತ್ತದೆ. ಮೊದಲು ಕೆಲ ಬಿಜೆಪಿ ನಾಯಕರು ಗ್ಯಾರಂಟಿ ಗಳು ಯಾರಿಗೂ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುತ್ತೇವೆ. ಗ್ಯಾರೆಂಟಿ ಕೊಟ್ಟಿಲ್ಲ ಎಂದರೆ ಪಟ್ಟಿ ನೀಡಲಿ ಎಂದು ಕುಟುಕಿದರು.

ಕೇಂದ್ರ ಸರ್ಕಾರದ ಅನಾಹುತಗಳು ಧರ್ಮದ ದುರುಪಯೋಗ ಈ ಬಾರಿ ಬಿಜೆಪಿಯ ಸೋಲಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತದೆ. ಮೋದಿಯವರ ಈಡೇರದ ಭರವಸೆಗಳು ಮತ್ತು ದಲಿತರಿಗೆ ಅಲ್ಪಸಂಖ್ಯಾತರಿಗೆ ಭಯದ ವಾತಾವರಣವಿದ್ದು, ಇದನ್ನು ತಪ್ಪಿಸಲು ಕಾಂಗ್ರೆಸ್‍ನ್ನು ಗೆಲ್ಲಿಸಬೇಕಾಗಿದೆ. ಗೀತಾಶಿವರಾಜ್‍ಕುಮಾರ್ 2ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್.ಟಿ. ಚಂದ್ರಶೇಖರ್, ಯು. ಶಿವಾನಂದ್, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಮಧು, ಜಿತೇಂದ್ರ ಇದ್ದರು.ಮೋದಿ ವಿಶ್ವನಾಯಕ ಹೇಗೆ?: ಗಾಂಧಿ ಕೊಂದವನಿಗೆ ನೈವೈದ್ಯ ಸಲ್ಲಿಸುವ ಬಿಜೆಪಿಗರಿಗೆ ಜಾತ್ಯತೀತ ಎಂಬ ಪದದ ಅರ್ಥವೇ ಗೊತ್ತಿಲ್ಲ. ಗಾಂಧಿ ಕೊಂದ ಗೊಡ್ಸೆ ಮನೆಯೇ ಹಿಂದೂ ಮಹಾ ಸಭಾದ ಕೇಂದ್ರವಾಗಿತ್ತು. ಗಾಂಧಿಯನ್ನು ಕೊಂದ ಕೇಸಿನಲ್ಲಿ ಸಾರ್ವಕರ್‌ ಕೂಡ ಆರೋಪಿಯಾಗಿದ್ದ ಎಂಬುವುದನ್ನು ಇವರು ಮರೆತಿದ್ದಾರೆ ಎಂದು ಕಿಮ್ಮನೆ ರತ್ನಾಕರ್‌ ಟೀಕಿಸಿದರು.ಅಂಬೇಡ್ಕರ್‌ ಬಗ್ಗೆ ಅಧ್ಯಯನ ಮಾಡದ ಕೆಲ ಬಿಜೆಪಿ ಮುಖಂಡರು ಕೂಗುಮಾರಿಗಳಾಗಿದ್ದಾರೆ. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್ಸಿಗರು ಸೋಲಿಸಿದ್ದರು ಎಂದು ಹೇಳುತ್ತಾರೆ. ಆದರೆ, ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಮಂತ್ರಿ ಮಾಡಿದ್ದನ್ನು ಇವರು ಮರೆತಿದ್ದಾರೆ ಎಂದು ಚಾಟಿ ಬೀಸಿದರು.

ಮೋದಿಯವರು ತುಂಬ ಸರಳ ಎಂದು ಬೊಗಳೆ ಬಿಡುತ್ತಾರೆ. ದಿನಕ್ಕೆ 5 ಜೊತೆ ಬಟ್ಟೆ ಬದಲಿಸುತ್ತಾರೆ. ಒಂದೊಂದು ಜೊತೆ ಬಟ್ಟೆಗೂ 10 ಲಕ್ಷ ರು. ಇದೆ. ಅವರು ಸಹಿ ಮಾಡುವ ಪೆನ್ನಿನ ಬೆಲೆಯೇ 2 ಲಕ್ಷ ರು.ವಾಗಿದೆ. ಇಂಥವರಿಗೆ ಬಡವರ ಸಂಕಷ್ಟಗಳು ಹೇಗೆ ಗೊತ್ತಾಗಬೇಕು. ಈ ದೇಶದ ಜನರಿಗೆ ಬಟ್ಟೆ ಇಲ್ಲ ಎಂದು ಬರಿ ಮೈಯಲ್ಲೆ ಇರುತ್ತಿದ್ದ ಗಾಂಧಿ ಎಲ್ಲಿ? ದೇಶದ ಜನ ಹೇಗಿದ್ದರೂ ಪರವಾಗಿಲ್ಲ ತಾನು ಮಾತ್ರ ಕೋಟ್ಯಂತರ ರುಪಾಯಿಯ ಬಟ್ಟೆಯನ್ನು ಧರಿಸಿಕೊಂಡು ತಿರುಗಾಡುವ ಮೋದಿ ಎಲ್ಲಿ? ಅವರೇಗೆ ವಿಶ್ವನಾಯಕನಾಗಲು ಸಾಧ್ಯ ಎಂದು ಪ್ರಶ್ನಿಸಿದರು.