ಸಾರಾಂಶ
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಪಟ್ಟಣದಲ್ಲಿ ಆರಂಭಿಸಿರುವ 4ನೇ ದಿನದ ಅಹೋ ರಾತ್ರಿ ಧರಣಿಗೆ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಬೆಂಬಲ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಪಟ್ಟಣದಲ್ಲಿ ಆರಂಭಿಸಿರುವ 4ನೇ ದಿನದ ಅಹೋ ರಾತ್ರಿ ಧರಣಿಗೆ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಬೆಂಬಲ ಸೂಚಿಸಿದ್ದಾರೆ.ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ನಡೆಯುವ ಧರಣಿ ಸ್ಥಳಕ್ಕೆ ಆಗಮಿಸಿ ರೈತಸಂಘಕ್ಕೆ ಬೆಂಬಲ ಸೂಚಿಸಿದ ಬಳಿಕ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಬೇಕು, ಸಾಗುವಳಿ ನೀಡಬೇಕು, ಅಕ್ರಮ ಸಕ್ರಮ ಮತ್ತೆ ಜಾರಿ ಗೊಳಿಸಬೇಕು ಎಂದು ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಘೋಷಿಸಿದರು.
ಈ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ. ಜೊತೆಗೆ ಈ ಹೋರಾಟವನ್ನು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಕೊಂಡೋಯ್ಯಬೇಕಿದೆ. ಕಳೆದ ಮೂರು ವರ್ಷದಿಂದ ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಒಂದು ವರ್ಷದ ನದಿಯಲ್ಲಿ ಹೆಚ್ಚು ನೀರು ಬಂದ ಕಾರಣ ಆಗಲಿಲ್ಲ. ಬಳಿಕ ಎರಡು ವರ್ಷಗಳಿಂದ ನೀರು ಹರಿಸಲು ಆಗದೇ ರೈತರಿಗೆ ಸರ್ಕಾರ, ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ದ್ರೋಹ ಎಸಗಿದ್ದಾರೆ ಎಂದು ದೂರಿದರು.ಜೂನ್ ನಲ್ಲೇ ಕೆರೆಗೆ ನೀರು ತುಂಬಿಸಲು ಜಿಲ್ಲಾಡಳಿತ ಮುಂದಾಗಬೇಕು. ಆದರೆ ಅದು ಕಳೆದ ಎರಡು ವರ್ಷಗಳಿಂದ ಆಗಿಲ್ಲ. ಕೆರೆಗೆ ನೀರು ತುಂಬಿಸಲು ಮೂರು ವರ್ಷಗಳು ಬೇಕಾ? ಪೋಸು ಕೊಡಲು ಕೆರಹಳ್ಳಿ ಪಂಪ್ ಹೌಸ್‌ಗೆ ಹೋಗಿದ್ರಾ ಎಂದು ಶಾಸಕ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು.
ತಾಂತ್ರಿಕ ದೋಷ ಎಂದು ಶಾಸಕರು ಹೇಳುತ್ತಿದ್ದಾರೆ. ತಾಂತ್ರಿಕ ದೋಷ ಸರಿಪಡಿಸಲು ನಾಲ್ಕೈದು ತಿಂಗಳು ಬೇಕಾ?ನಿಮಗೆ ಜವಬ್ದಾರಿ ಇಲ್ಲದೇ ಇರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ನವಂಬರ್ ತಿಂಗಳಲ್ಲಿ ನೀರು ಬಿಡಿಸ್ತೀನಿ ಅಂತೀರಾ ನಿಮ್ಮ ಮೇಲೆ ನಂಬಿಕೆಯೇ ಹೋಗಿದೆ ಎಂದು ಶಾಸಕರನ್ನು ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಶಾಸಕರೇ ನೀವು ಹೇಳಿದ ಮಾತಿನಂತೆ ನೀರು ಬಿಟ್ಟರೆ ಸರಿ, ಇಲ್ಲ ಅಂದ್ರೆ ರೈತರಿಂದ ತೀವ್ರ ಪ್ರತಿರೋಧವಂತೂ ಎದುರಿಸಬೇಕಾಗುತ್ತದೆ, ಜನ ರೊಚ್ಚಿಗೆದ್ರೇ ನೀವು ತಡೆಯೋಕೆ ಆಗಲ್ಲ ಎಂಬ ಅರಿವು ಇರಲಿ. ಸಾಗುವಳಿ ಚೀಟಿ ಕೊಡಲು ಜಂಟಿ ಸರ್ವೆ ಮಾಡಿಸ್ತೀನಿ ಎಂದಿದ್ದೀರಾ ಬೇಗ ಮಾಡಿಸಿ ಅರ್ಹರಿಗೆ ಸಾಗುವಳಿ ಚೀಟಿ ಕೊಡಿಸಿ ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್,ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್,ಬಿಜೆಪಿ ಮುಖಂಡ ಪ್ರಣಯ್,ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ,ತಾಲೂಕು ಅಧ್ಯಕ್ಷ ಹಂಗಳ ದಿಲೀಪ್,ಶಿವಮಲ್ಲು,ಮಾಧು, ಲೋಕೇಶ್,ಶಿವಣ್ಣ, ನಾಗರಾಜು,ಸುರೇಶ್,ಮನು,ಮಹೇಂದ್ರ,ನಾಗಮಲ್ಲು,ಪುರಸಭೆ ಸದಸ್ಯ ನಾಗೇಶ್, ಮಂಜುನಾಥ ಸೇರಿದಂತೆ ಹಲವರಿದ್ದರು.