ಬಂಟ್ವಾಳ: ಮೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವಿದ್ಯುತ್ ಮೀಟರ್ ರೀಡಿಂಗ್ ಕೆಲಸ ಮಾಡುವ ವ್ಯಕ್ತಿ ಮೇಲೆ ಸಾಕು ನಾಯಿ ದಾಳಿ ಮಾಡಿದ ಘಟನೆ ನಡೆದಿದ್ದು,ದಾಳಿಗೊಳಗಾದ ವ್ಯಕ್ತಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಎಂಬವರಿಗೆ ನಾಯಿ ದಾಳಿ ಮಾಡಿದೆ.
ಅವರು ಬಂಟ್ವಾಳ ಮೆಸ್ಕಾಂ ಇಲಾಖೆಯ ಹೊರಗುತ್ತಿಗೆಯಲ್ಲಿ ಸೂಪರ್ ವೈಸರ್ ವೃತ್ತಿಯಲ್ಲಿದ್ದಾರೆ. ಆದರೆ ಕಳೆದ ಹತ್ತು ತಿಂಗಳಿನಿಂದ ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿ ಇಲ್ಲದೆ ಇರುವ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮಪಂಚಾಯತ್ ಕೈತ್ರೋಡಿ ಕ್ವಾಟರ್ಸ್ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದಾರೆ.ಸೋಮವಾರ ಕೈತ್ರೋಡಿ ಎಂಬಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮಾಡಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬೈಕ್ ನ ಬಳಿ ತೆರಳುತ್ತಿದ್ದಂತೆ ಮನೆಯಂಗಳದಲ್ಲಿದ್ದ ನಾಯಿಯೊಂದು ಸಂಕೋಲೆಯನ್ನು ತುಂಡರಿಸಿದ ಬಂದು ದಾಳಿ ಮಾಡಿದೆ.
ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಬಲವಾದ ಗಾಯವಾಗಿದ್ದು,ಇಂದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.