ಕರಾವಳಿ ಉತ್ಸವ ಅಂಗವಾಗಿ ನಡೆದ ಕುಡ್ಲ ಶ್ವಾನ ಪ್ರದರ್ಶನ ಕಾರ್ಯಕ್ರಮದ ಫಲಿತಾಂಶ ಪ್ರಕಟಿಸಲಾಗಿದೆ. ಉಡುಪಿಯ ಸುನಿಲ್ ಕುಮಾರ್ ಅವರ ಜರ್ಮನ್ ಶೆಫರ್ಡ್ ತಳಿಯ ಓಟ್‌ಮೆನ್ ಹೆಸರಿನ ಶ್ವಾನ ಚಾಂಪಿಯನ್

ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ನಡೆದ ಕುಡ್ಲ ಶ್ವಾನ ಪ್ರದರ್ಶನ ಕಾರ್ಯಕ್ರಮದ ಫಲಿತಾಂಶ ಪ್ರಕಟಿಸಲಾಗಿದೆ. ಉಡುಪಿಯ ಸುನಿಲ್ ಕುಮಾರ್ ಅವರ ಜರ್ಮನ್ ಶೆಫರ್ಡ್ ತಳಿಯ ಓಟ್‌ಮೆನ್ ಹೆಸರಿನ ಶ್ವಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಶ್ವಾನ ಪ್ರದರ್ಶನದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಮೂರರಿಂದ ಆರು ತಿಂಗಳ ಮರಿಗಳ ಮೊದಲನೇ ವಿಭಾಗ, 6ರಿಂದ 12 ತಿಂಗಳ ಮರಿಗಳು, 12 ತಿಂಗಳು ಮೇಲ್ಪಟ್ಟ ಶ್ವಾನಗಳ ತಳಿವಾರು ವಿಭಾಗದಲ್ಲಿ ಸುಮಾರು 230 ಶ್ವಾನಗಳು ಭಾಗವಹಿಸಿದ್ದವು.

ಎಲ್ಲ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತ ಶ್ವಾನಗಳಿಗೆ ಪದಕ ಸಹಿತ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ತಲಾ 2,000 ರು., 1,500 ರು. ಹಾಗೂ 1,000 ರು. ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲ ಶ್ವಾನಗಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು.ಪ್ರತಿ ವಿಭಾಗದಲ್ಲಿ ಮೊದಲನೇ ಸ್ಥಾನ ವಿಜೇತ ಶ್ವಾನಗಳು ಚಾಂಪಿಯನ್ ಸುತ್ತಿನಲ್ಲಿ ಸ್ಪರ್ಧಿಸಿದವು. ಸ್ಪರ್ಧೆಯ ಅಂತಿಮ ಸುತ್ತಿನ ನಂತರ 4ನೇ ರನ್ನರ್ ಅಪ್ ಆದ ಸುರತ್ಕಲ್ ಆರಾಧ್ಯ ಅವರ ಗೋಲ್ಡನ್ ರಿಟ್ರಿವರ್ ತಳಿಯ ಚೀಕು ಹೆಸರಿನ ಶ್ವಾನಕ್ಕೆ 5,000 ರು. ನಗದು ಬಹುಮಾನ ಮತ್ತು ಟ್ರೋಫಿ, ಮೂರನೇ ರನ್ನರ್ ಅಪ್- ಮಂಗಳೂರಿನ ಭರತ್ ಪ್ರಸಾದ್ ಅವರ ಕ್ಯಾರವನ್ ಹೌಂಡ್ ತಳಿಯ ಬಿಂದು ಹೆಸರಿನ ಶ್ವಾನಕ್ಕೆ 10,000 ರು. ನಗದು ಬಹುಮಾನ ಮತ್ತು ಟ್ರೋಫಿ, ಎರಡನೇ ರನ್ನರ್ ಅಪ್- ಮಂಗಳೂರಿನ ರಾಯಿಸ್ಟನ್ ಅವರ ರಾಟ್ ವೀಲರ್ ತಳಿಯ ಕ್ಯಾಲಿ ಹೆಸರಿನ ಶ್ವಾನಕ್ಕೆ 15,000 ರು. ನಗದು ಬಹುಮಾನ ಮತ್ತು ಟ್ರೋಫಿ, ಮೊದಲನೇ ರನ್ನರ್ ಅಪ್- ಮಂಗಳೂರಿನ ಶಿಶಿರ್ ಅವರ ಲಾಸಾ ಅಪ್ಸೇ ತಳಿಯ ಸಾನ್ಸ ಹೆಸರಿನ ಶ್ವಾನಕ್ಕೆ 20,000 ರು. ನಗದು ಬಹುಮಾನ ಮತ್ತು ಟ್ರೋಫಿ, ಚಾಂಪಿಯನ್ ಆಗಿ ಹೊರಹೊಮ್ಮಿದ ಉಡುಪಿಯ ಸುನಿಲ್ ಕುಮಾರ್ ಅವರ ಜರ್ಮನ್ ಶೆಫರ್ಡ್ ತಳಿಯ ಓಟ್ ಮೆನ್ ಹೆಸರಿನ ಶ್ವಾನಕ್ಕೆ 25,000 ರು. ನಗದು ಬಹುಮಾನ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ನೇತೃತ್ವ ವಹಿಸಿದ್ದರು.