ಮೂರು ನಾಯಿಗಳು ನಡೆಸಿಕೊಟ್ಟ ಸಾಹಸ ಚಟುವಟಿಕೆಗಳು ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದವು

ಪಾಲಾಕ್ಷ ಬಿ.ತಿಪ್ಪಳ್ಳಿ ಕೊಪ್ಪಳ

ದಕ್ಷಿಣ ಭಾರತದ ಕುಂಭ ಮೇಳ ಎಂದೇ ಕರೆಯಲಾಗುವ ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವವು ಪ್ರತಿ ವರ್ಷ ಹಲವು ರೀತಿಯ ವಿಶೇಷತೆಗೆ ಹೆಸರಾಗುತ್ತಿದೆ. ಜಾತ್ರಾಮಹೋತ್ಸವ ಅಂಗವಾಗಿ ಸಾಹಸ ಪ್ರದರ್ಶನಗಳು ಕಣ್ಮನ ಸೆಳೆಯುತ್ತಿವೆ.

ಜಾತ್ರೆಯ ಮೊದಲ ದಿನ ಸೋಮವಾರ ಗವಿಮಠದ ಆವರಣದಲ್ಲಿ ಆಯೋಜಿಸಿದ್ದ ಶ್ವಾನದಳದ ಚಾಣಾಕ್ಷತನ, ಕರಾಟೆ ಹಾಗೂ ದಾಲಪಟ ಸಾಹಸ ಪ್ರದರ್ಶನಗಳು ಸೇರಿದ್ದ ಜನರನ್ನು ಮೈನವಿರೇಳಿಸುವಂತೆ ಮಾಡಿದವು.

ಸಿಎಆರ್‌ನಲ್ಲಿ ತರಬೇತಿ ನೀಡಲಾದ ಶ್ವಾನದಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಿಂಧು, ಕಿನ್ನಿ ಮತ್ತು ಬಿಂದು ಹೆಸರಿನ ಶ್ವಾನಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಅಪರಾಧ ಪತ್ತೆ ಹಾಗೂ ದೇಶದ ಆಂತರಿಕ ಭದ್ರತೆಯನಲ್ಲಿ ಶ್ವಾನಗಳ ಪಾತ್ರ ಎಷ್ಟು ಮುಖ್ಯ ಎಂಬುದಲ್ಲದೆ, ವಿದ್ವಾಂಸಕ ಕೃತ್ಯ ಎಸಗುವಿಕೆ, ಸ್ಫೋಟಕ ಪತ್ತೆ, ಅಪರಾಧ ಎಸಗಿದ ವ್ಯಕ್ತಿಯ ಗುರುತು, ಕರವಸ್ತ್ರದ ವಾಸನೆ ಕಂಡು ಹಿಡಿಯುವುದು ನೋಡಗರನ್ನು ನಿಬ್ಬೆರಗಾಗಿಸಿತು. ಶ್ವಾನಗಳಿಂದ ಬ್ಯಾಗ್ ತಪಾಸಣೆ, ಆರೋಪಿಗಳ ಪತ್ತೆ, ಶಂಕಿತ ವಸ್ತುಗಳ ಪತ್ತೆಯ ಪ್ರಾತ್ಯಕ್ಷಿಕೆಯು ಕುತೂಹಲ ಕೆರಳಿಸಿತು. ತಮ್ಮ ಬುದ್ಧಿವಂತಿಕೆ ಮತ್ತು ಸಾಹಸ ಕೌಶಲ್ಯಗಳನ್ನು ಪ್ರದರ್ಶನ ನೋಡುಗರಿಂದ ಚಪ್ಪಾಳೆ, ಶಿಳ್ಳೆ, ಕೇಕೆಗಳು ಕೇಳಿ ಬಂದವು.

ಮೂರು ನಾಯಿಗಳು ನಡೆಸಿಕೊಟ್ಟ ಸಾಹಸ ಚಟುವಟಿಕೆಗಳು ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದವು.

ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಇತರರು ಇದ್ದರು.

ಕೊಪ್ಪಳ: ದೇಶೀಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗವಿಮಠದಲ್ಲಿ ಸಾಹಸ ಕ್ರೀಡೆಗಳು ನಡೆದವು.

ಕರಾಟೆ ಭಾರತ ದೇಶದ ಮೂಲ ಕಲೆಯಾಗಿದೆ. ಯುದ್ಧದ ಕಲೆಗಳು ಕರಾಟೆ ಮೂಲಕ ನಮ್ಮ‌‌ ದೇಶದಿಂದ ಪ್ರಸಾರವಾಗಿರುವುದು ವಿಶೇಷ.

ಭೂಮಿ ಫೌಂಡೇಶನ್, ಮೌನೇಶ ವಡ್ಡಟ್ಟಿ, ಗಂಗಾವತಿ ಬಾಬುಸಾಬ್ ನೇತೃತ್ವದಲ್ಲಿ ಗವಿಮಠದ ಆವರಣದಲ್ಲಿ ಆಯೋಜಿಸಿದ್ದ ಕರಾಟೆ ಪ್ರದರ್ಶನ ನೋಡುಗರ ಮೈನವಿರೇಳಿಸಿತು. ಕೈಯಿಂದ ಟೈಲ್ಸ್, ಹೆಂಚು ಒಡೆಯುವುದು, ಹೊಟ್ಟೆಯ ಮೇಲೆ ಕಲ್ಲುಬಂಡೆ ಇಟ್ಟು ಸುತ್ತಿಗೆಯಿಂದ ತುಂಡರಿಸುವುದು ಮತ್ತು ಹೊಟ್ಟೆಯ ಮೇಲೆ ದ್ವಿಚಕ್ರ ವಾಹನ ರೈಡ್ ಮಾಡುವ ದೃಶ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಡಾ.ಜಮಿವುಲ್ಲಾ ಅವರು ಟೈಲ್ಸ್‌ಗಳನ್ನು ಒಡೆದರು. ಇವರು ಮೂರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕರಾಟೆ ತರಬೇತಿ ನೀಡುತ್ತಾ ಬಂದಿರುವುದು ವಿಶೇಷ. ಬೆಂಗಳೂರಿನಿಂದ ಆಗಮಿಸಿದ್ದ ಕೊಪ್ಪಳ ಮೂಲದ ನಿಹಾನ್ ಎನ್. ಕುಂಬಾರ ಟೇಕ್ವಾಂಡೋ ಪ್ರದರ್ಶನ ನೀಡಿದರು. ಇವರು ಕೆಂಪೇಗೌಡ ಸರ್ವರ್ ಟೇಕ್ವಾಂಡೋ ಟ್ರೈನಿಮಗ್ ಸೆಂಟರ್‌ನಲ್ಕಿ ತರಬೇತಿ ಪಡೆಯುತ್ತಿದ್ದಾರೆ.

ಇದೆ ವೇಳೆ ಹನಮಸಾಗರ ಪೆಂಕಾಕ್ ಸಿಲಾಟ್ ತಂಡದಿಂದ ಕರಾಟೆ ಪ್ರದರ್ಶನ ನಡೆಯಿತು. ಜೆಸ್ಕಾಂ ಇಇ ಮೋಟ್ಲಾ ನಾಯಕ್ ಕರಾಟೆ ಪ್ರದರ್ಶನಕ್ಕೆ ಚಾಲನೆ ನೀಡಿದರು.

ದಾಲಪಟ ಸಾಹಸ ಪ್ರದರ್ಶನ:

ಉತ್ತರ ಭಾರತದ ಸಾಂಪ್ರದಾಯಿಕ ಕಲೆಯಾದ ದಾಲಪಟ ಸಾಹಸ ಪ್ರದರ್ಶನವು ಗವಿಮಠ ಜಾತ್ರೆಯ ಆಕರ್ಷಣೆಯಾಗಿತ್ತು. ಚಿಲ್ಕಮುಖಿಯ ಶ್ರೀಶೈಲ ಮಲ್ಲಿಕಾರ್ಜುನ ಸಾಹಸ ಜನಪದ ಅಲೆಮಾರಿ ಕಲಾವಿದರ ಸಂಘದ ಹಿರಿಯ ಕಲಾವಿದ ಹನುಮಂತಪ್ಪ ಬಬ್ಬಲ್ ಮತ್ತು ಅಬ್ಬಿಗೇರಿಯ ಶ್ರೀ ಮಾರುತೇಶ್ವರ ಅಲೆಮಾರಿ ಕಲಾವಿದರ ಸಂಘದಿಂದ ದಾಲಪಟ ಪ್ರದರ್ಶನ ನಡೆಯಿತು.

ದಂಡ ವರಸೆ, ಕತ್ತಿ ವರಸೆ, ಸಂಭಾಳ, ಗೊಂಬೆಗಳ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತು. ದಂಡ ವರಸೆ ಮತ್ತು ಕತ್ತಿ ವರಸೆ ನೋಡುಗರ ಕುತೂಹಲ ಕೆರಳಿಸಿತು. ಯುವಕರಿಂದ ಹಿಡಿದು ಹಿರಿಯರು ಕೂಡ ಸಾಹಸ ಪ್ರದರ್ಶನ ಮಾಡಿದರು. ಸಾಹಸ ಪ್ರದರ್ಶನ ಕಂಡ ನೋಡುಗರು ಆಶ್ಚರ್ಯ ವ್ಯಕ್ತಪಡಿಸಿದರು.