ನವರಾತ್ರಿ ‘ಬೊಂಬೆ ಲೋಕ’ ಸೃಷ್ಟಿಸಿದ ಬಿ.ಸಿ.ರೋಡ್‌ ದಂಪತಿ

| Published : Oct 07 2024, 01:37 AM IST

ಸಾರಾಂಶ

ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಪಿ.ಆರ್.ಒ. ಆಗಿರುವ ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ಅವರೇ ಈ ಬೊಂಬೆಲೋಕದ ಸೃಷ್ಟಿದಾತರು. ಕಳೆದ 16 ವರ್ಷಗಳಿಂದ ಪ್ರತೀ ವರ್ಷವೂ ಬೊಂಬೆಗಳ ಆರಾಧನೆಯ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತಿರುವ ಈ ದಂಪತಿ, ಈ ಬಾರಿ 17ನೇ ವರ್ಷಕ್ಕೆ ಮತ್ತಷ್ಟು ಹೊಸತನ ತುಂಬಿಕೊಟ್ಟಿದ್ದಾರೆ.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ

ಆ ಬೊಂಬೆಗಳನ್ನು ನೋಡುತ್ತಿದ್ದರೆ ಎಂಥವರೂ ಮೈಮರೆಯಲೇಬೇಕು.. ಪೂರಕ ವಸ್ತ್ರಾಲಂಕಾರದೊಂದಿಗೆ ಬಣ್ಣಬಣ್ಣದ ವಿದ್ಯುದ್ದೀಪಗಳ ಬೆಳಕಿನಲ್ಲಿ ಅಂದವಾಗಿ ಜೋಡಿಸಿಟ್ಟಿರುವ ನೂರಾರು ಬೊಂಬೆಗಳು ಪುರಾಣದ ಕತೆಗಳ ಜೊತೆಗೆ, ವಾಸ್ತವ ಜಗತ್ತನ್ನೇ ತೆರೆದಿಟ್ಟಿದೆ..

ಹೌದು ಇದು ನವರಾತ್ರಿ ಸಂಭ್ರಮಕ್ಕೆಂದು ಬಿ.ಸಿ. ರೋಡಿನಲ್ಲಿ ಮೈಸೂರು ಮೂಲದ ದಂಪತಿ ಸೃಷ್ಟಿಸಿರುವ ಅಪರೂಪದ ‘ಬೊಂಬೆಲೋಕ’.ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಪಿ.ಆರ್.ಒ. ಆಗಿರುವ ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ಅವರೇ ಈ ಬೊಂಬೆಲೋಕದ ಸೃಷ್ಟಿದಾತರು.ಕಳೆದ 16 ವರ್ಷಗಳಿಂದ ಪ್ರತೀ ವರ್ಷವೂ ಬೊಂಬೆಗಳ ಆರಾಧನೆಯ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತಿರುವ ಈ ದಂಪತಿ, ಈ ಬಾರಿ 17ನೇ ವರ್ಷಕ್ಕೆ ಮತ್ತಷ್ಟು ಹೊಸತನ ತುಂಬಿಕೊಟ್ಟಿದ್ದಾರೆ.ವೃತ್ತಿ ಸಹಜ ವರ್ಗಾವಣೆ ಹಿನ್ನೆಲೆಯಲ್ಲಿ ಕಳೆದ 4-5 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯದಲ್ಲಿದ್ದಾರೆ. ಇವರು ಆರಂಭದಲ್ಲಿ ಎರಡು ವರ್ಷದ ಉಪ್ಪಿನಂಗಡಿಯಲ್ಲಿ ಇದ್ದರು. ಪ್ರಸ್ತುತ ಬಿ.ಸಿ.ರೋಡ್‌ನ ಕಿಂಗ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ.ಬಣ್ಣ ಬಣ್ಣದ ವಿದ್ಯುದ್ದೀಪಗಳ ಅಲಂಕಾರದಲ್ಲಿ ಜೋಡಿಸಿಟ್ಟಿರುವ ದೇವದೇವತೆಯರ ದೃಶ್ಯ ವೈಭವ, ಮೈಸೂರು ದಸರಾ ಮೆರವಣಿಗೆ, ಹೆಣ್ಣುಮಗುವಿನ ಜೀವಿತಾವಧಿಯ ಹಂತಗಳು ಹೀಗೆ ಮೂರು ವಿಭಾಗದಲ್ಲಿ ಕಲಾತ್ಮಕವಾಗಿ ಜೋಡಿಸಿಡಲಾಗಿದೆ.* ಕತೆ ಹೇಳುವ ಬೊಂಬೆಗಳುಜೋಡಿಸಿಟ್ಟ ಬೊಂಬೆಗಳ ಪುಷ್ಪಾ ನಂದಕುಮಾರ್, ಮನದಟ್ಟಾಗುವ ಹಾಗೆ ವಿವರ ನೀಡುತ್ತಾರೆ. ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಬೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ಸೀನ್, ನೃತ್ಯಗಾತಿಯರ ಬೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ವಿಷ್ಣುವಿನ ಹತ್ತು ಅವತಾರಗಳು, ಗೌರಿ, ನವದುರ್ಗೆಯರ ಬೊಂಬೆಗಳು ಇಲ್ಲಿವೆ.ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ. ಮಹಿಷಾಸುರನ ಬೊಂಬೆಯೂ ಇದೆ, ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಬೊಂಬೆ ಎಂದು ಹೇಳಲಾಗುವ ರಕ್ತ ಚಂದನ ಮರದ ಬೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ, ಸರಸ್ವತಿ ಬೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಹಾಕಿಕೊಂಡು ಊಟ ಮಾಡುವ ದೃಶ್ಯಗಳು ಇಲ್ಲಿವೆ. ಅಲ್ಲದೆ, ಸಂಗೀತಗಾರರು, ವಾದ್ಯಗೋಷ್ಠಿ ಇಲ್ಲಿದೆ.ತೊಟ್ಟಿಲಿನಿಂದ ತೊಟ್ಟಿಲವರೆಗೆ:

ಸಾಂಪ್ರದಾಯಿಕ ಬೊಂಬೆಗಳ ಜೊತೆಯಲ್ಲಿ ಹೆಣ್ಣು ಮಗಳು ಜೀವಿತಾವಧಿಯಲ್ಲಿ ಸಂಭ್ರಮಿಸುವ ವಿವಿಧ ಮಜಲುಗಳನ್ನು ತೊಟ್ಟಿಲಿನಿಂದ ತೊಟ್ಟಿಲ ವರೆಗೆ ಎನ್ನುವ ವಿಶಿಷ್ಟ ಪರಿಕಲ್ಪನೆಯಲ್ಲಿ ಜೋಡಿಸಿಟ್ಟದ್ದು, ಈ ಬಾರಿಯ ಬೊಂಬೆಲೋಕಕ್ಕೆ ವಿಶೇಷ ಮೆರುಗು ತಂದಿದೆ.ಜೊತೆಗೆ ಕೂಡುಕುಟುಂಬದ ಭೋಜನದ ದೃಶ್ಯಾವಳಿಯಲ್ಲಿ ಕೌಟುಂಬಿಕ ವಾತಾವರಣದಲ್ಲಿ ಊಟ, ಅಡುಗೆಮನೆ, ಹಣ್ಣು, ತರಕಾರಿಗಳು, ಧವಸ ಧಾನ್ಯಗಳನ್ನು ಸಂಕೇತಿಸುವ ಬೊಂಬೆಗಳ ಚಿತ್ರಣ ಅಂದವಾಗಿ ಮೂಡಿಬಂದಿದ್ದು, ಬೆರಗು ಮೂಡಿಸುವಂತಿದೆ.ಮನೆಯಲ್ಲೇ ದಸರಾ ಮೆರವಣಿಗೆ:ಮೈಸೂರು ದಸರಾ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರಿನವರಾದ ನಾವು ದಸರಾ ಸಂದರ್ಭ ಮನೆಯಲ್ಲೇ ಬೊಂಬೆಗಳನ್ನು ಇಟ್ಟು ನವರಾತ್ರಿ ಆಚರಿಸುತ್ತೇವೆ.ಹೀಗಾಗಿ ಅದರ ದೃಶ್ಯವೈಭವವನ್ನು ಮೂಡಿಸಲಾಗಿದೆ. ಆನೆ, ಒಂಟೆ, ಕುದುರೆ ಸಾಲಿನೊಂದಿಗೆ ವಾಹನಗಳು, ಆನೆ ಮೇಲೆ ಮಹಾರಾಜರು, ಆನೆಯ ಮೇಲೆ ಅಂಬಾರಿ ಸಹಿತ ಮೈಸೂರಿನ ಸಯ್ಯಾಜಿರಾವ್ ಸರ್ಕಲ್‌ನಲ್ಲಿ ಸಾಗುತ್ತಿರುವ ದಸರಾ ಮೆರವಣಿಗೆಯ ದೃಶ್ಯದ ಪ್ರತಿಕೃತಿ ನಾವು ನಿರ್ಮಿಸಿದ್ದೇವೆ ಎನ್ನುತ್ತಾರೆ ಪುಷ್ಪಾ.............

ಹತ್ತು ದಿನ ನವರಾತ್ರಿಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಕಾರ್ಯನಿಮಿತ್ತ ಹಲವಾರು ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಸಂಪ್ರದಾಯವನ್ನು ಬಿಟ್ಟಿಲ್ಲ, ಇದು ನಮಗೆ ಖುಷಿಕೊಟ್ಟಿದೆ.। ನಂದಕುಮಾರ್, ಪುಷ್ಪಾ ನಂದಕುಮಾರ್