ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಶ್ರೀಲಂಕಾ, ಅಫ್ಘಾನಿಸ್ತಾನ, ಉಜ್ಬೇಕಿಸ್ಥಾನ, ಸೌತ್ ಆಫ್ರಿಕಾ ಸೇರಿದಂತೆ ವಿವಿಧ ದೇಶದ ವಿದ್ಯಾರ್ಥಿಗಳು, ಹೊರ ರಾಜ್ಯದ ವಿದ್ಯಾರ್ಥಿಗಳು ಇಟ್ಟಿದ್ದ ಆಹಾರ ಮಳಿಗೆ, ಇನ್ನು ಇದರ ಜೊತೆಗೆ ಮಂಗಳೂರಿನ ಆಹಾರ ಮಳಿಗೆಯಲ್ಲಿ ವೈವಿದ್ಯಮಯ ತಿಂಡಿಗಳ ಆಕರ್ಷಣೆ.ಇದು ಕಂಡು ಬಂದಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ, ಟೂರಿಸಂ ವಿಭಾಗದ ವತಿಯಿಂದ ಗುರುವಾರ ಮಂಗಳ ಸಭಾಂಗಣದ ಬಳಿ ಇಟೋಪಿಯಾ-2025 ಆಹಾರ ಮೇಳದಲ್ಲಿ.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ವಿವಿಧ ತಿಂಡಿ ತಿನಸುಗಳು ಮಳಿಗೆಗಳನ್ನು ಇಟ್ಟಿದ್ದರು. ವೆಜ್ ಹಾಗೂ ನಾನ್ ವೆಜ್ ಪ್ರಿಯರಿಗೆ ಇಷ್ಟವಾಗುವಂತಹ ಪಾನಿಪೂರಿ, ಮಸಾಲಪೂರಿ, ಬಿರಿಯಾನಿ, ಕೋರಿ ರೊಟ್ಟಿ, ಕೇರಳದ ಕಪ್ಪ ಜೊತೆ ಚಿಕನ್ ಕರಿ, ಬಿರಿಯಾನಿ, ಕೇಕ್, ಫ್ರೆಂಚ್ ಪ್ರೈಸ್, ವಿವಿಧ ರೀತಿಯ ತಂಪು ಪಾನೀಯ, ಮೋಕ್ಟೆಲ್ ಸೇರಿದಂತೆ ವಿವಿಧ ಪಾನೀಯ ಮಳಿಗೆಗೂ ಎಲ್ಲರನ್ನು ತಮ್ಮತ್ತ ಸೆಳೆಯಿತು. ಕಡಿಮೆ ಅವಧಿಯಲ್ಲಿ ಮಾಡಿ ಇಟ್ಟಿದ್ದ ಎಲ್ಲ ತಿನಿಸುಗಳು ಖಾಲಿಯಾಗಿ ಕೆಲವರು ನಿರಾಶೆಯಿಂದ ಹಿಂದೆ ಹೋದ ದೃಶ್ಯ ಕಂಡು ಬಂದಿತ್ತು.ವಿದೇಶಿ, ಹೊರರಾಜ್ಯದ ವಿದ್ಯಾರ್ಥಿಗಳ ಮಳಿಗೆಗಳ ಜೊತೆಗೆ ಮಂಗಳೂರಿನ ವಿದ್ಯಾರ್ಥಿಗಳು ತುಳುನಾಡಿನ ವಿಶೇಷ ತಿಂಡಿ ತಿನಸುಗಳು ಇದ್ದವು. ಅದರಲ್ಲೂ ಕೋರಿ ರೊಟ್ಟಿ ಹಾಗೂ ಬಿರಿಯಾನಿಗೆ ಬೇಡಿಕೆ ಹೆಚ್ಚಾಗಿತ್ತು. ಇನ್ನು ಫೋನ್ ಪೇ, ಗೂಗಲ್ ಪೇಗಳನ್ನು ಬಹುತೇಕ ಸ್ಟಾಲ್‌ಗಳಲ್ಲಿ ಇಡಲಾಗಿತ್ತು. ಆಹಾರ ಮೇಳದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಭಾಗವಹಿಸಿ, ಎಲ್ಲ ಮಳಿಗೆಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಆಹಾರದ ಬಗೆಗೆ ಮಾಹಿತಿ ಪಡೆದು ಅವರನ್ನು ಹುರಿದುಂಬಿಸುವ ಕೆಲಸ ಮಾಡಿದರು.
ನಂತರ ಮಾತನಾಡಿದ ಅವರು, ಮಂಗಳಾ ಸಭಾಂಗಣದ ಒಳಗಡೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ’ ಕಾರ್ಯಕ್ರಮ ನಡೆಯುತ್ತಿದೆ. ಇನ್ನೊಂದು ಕಡೆ ಅವರೇ ತಯಾರಿಸಿದ ಸ್ಟಾಲ್‌ಗಳಲ್ಲಿ ಬಗೆ ಬಗೆ ಆಹಾರ ತಿನಿಸುಗಳ ಪ್ರದರ್ಶನ ಆಹಾರ ಮೇಳ ಆಯೋಜಿಸಲಾಗಿದೆ. ಎಂಬಿಎ ಟೂರಿಸಂ ವಿಭಾಗದ ವತಿಯಿಂದ ನಡೆಯುವ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಜೋಡಿಸುವ ಮೂಲಕ ಪ್ರೇಕ್ಷಕರನ್ನು ತಮ್ಮತ್ತಾ ಸೆಳೆದುಕೊಳ್ಳಲು ಉತ್ತಮ ಪ್ರಯೋಗ ಮಾಡಿದ್ದಾರೆ. ಜೊತೆಗೆ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸಿ ತೊಡಗಿಸಿಕೊಂಡಿರುವುದು ವಿಶೇಷ ಎಂದರು.ಈ ಸಂದರ್ಭ ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಶೇಖರ್ ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಪ್ರಶಾಂತ್ ನಾಯ್ಕ್, ಪ್ರಾಧ್ಯಾಪಕ ಡಾ.ಜೊಸೆಫ್ ಪಿ.ಡಿ. ಮೊದಲಾದವರು ಉಪಸ್ಥಿತರಿದ್ದರು.