ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೌಟುಂಬಿಕ ಹಿಂಸೆ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಕಾಯ್ದೆಯನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನ್ಯಾಯಯುತವಾಗಿ ನಿರ್ವಹಿಸುವುದು ಬಹಳಷ್ಟು ಅಗತ್ಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ನವನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಗ್ರಾಮೀಣ ಪ್ರತಿಷ್ಠಾನದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಅನುಷ್ಠಾನದಲ್ಲಿ ಭಾಗೀದಾರರ ಇಲಾಖೆಗಳ ಪಾತ್ರ ಕುರಿತ 2 ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೌಟುಂಬಿಕ ಕಲಹ, ಗಂಡ ಹೆಂಡತಿ ಜಗಳ, ಅತ್ತೆ, ನಾದಿನಿ, ಮಾವರು ಜಗಳಗಳು ನಮ್ಮ ಸಂಪ್ರದಾಯದ ಕೌಟುಂಬಿಕ ವ್ಯವಸ್ಥೆಯಲ್ಲಿ ಮನೆಯೊಳಗೆ ಬಗೆಹರಿಯಬೇಕು. ಪೊಲೀಸ್ ಠಾಣೆ, ನ್ಯಾಯಾಲಯ ಹತ್ತಿರ ಹೋಗಬಾರದೆಂಬುದು ನಮ್ಮ ಪೂರ್ವಜರು ಕಲ್ಪನೆಯಾಗಿತ್ತು. ಕಲ್ಯಾಣ ರಾಜ್ಯದಲ್ಲಿ ಈ ಪರಿಕಲ್ಪನೆ ಬದಲಾಗಿದೆ. ಅನ್ಯಾಯ ಅನುಭವಿಸುವರು ಕೂಡ ಒಂದು ಅಪರಾಧವಾಗಿದೆ. ಈ ಕಾಯ್ದೆ ಅಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕಾನೂನು ಸಂರಕ್ಷಣೆ ದೊರೆಯಲಿದೆ ಎಂದರು.
ಮುಂಬರುವ ಪೀಳಿಗೆಗೆ ಇಂತಹ ಕಾಯ್ದೆಗಳ ಮಾಹಿತಿ ಅವಶ್ಯ. ನೀವು ಇದನ್ನು ತಿಳಿಯುವುದರ ಜೊತೆಗೆ ಸಮೂಹಕ್ಕೆ ಸಮುದಾಯಕ್ಕೆ ಈ ಕುರಿತಾದ ಮಾಹಿತಿ ರವಾನಿಸುವುದು ಅತ್ಯವಶ್ಯಕ. ಕುಟುಂಬ ಸಮಾಜದ ಒಂದು ಮೂಲ ಸಂಸ್ಥೆ ಇದರಲ್ಲಾಗುವ ಬದಲಾವಣೆಗಳು, ಏರಿಳಿತಗಳು ನೇರವಾಗಿ ಸಮಾಜಕ್ಕೆ ಪರಿಣಾಮ ಬೀರುತ್ತದೆ. ಆದ್ದರಿಂದ ಕುಟುಂಬದಲ್ಲಿ ತಾಳ್ಮೆ, ಸಹನೆ, ಸಹಬಾಳ್ವೆ ಪರಸ್ಪರ ಗೌರವಿಸೋಕೆ ಇವುಗಳು ಒಡಮೂಡಿದಾಗ ಮಾತ್ರ ಶಾಂತಿಯುತ ಜೀವನ ನಡೆಸಲು ಸಾಧ್ಯವೆಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ್ ದಿಡ್ಡಿ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಕಾಯ್ದೆಯ ಅಡಿಯಲ್ಲಿ ಒಬ್ಬ ಹಿಂಸೆಕ್ಕೊಳಗಾದ ಮಹಿಳೆಗೆ ವಾಸದ ಆದೇಶ ದೊರಕಿಸಿಕೊಡಲು ಸಾಧ್ಯ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸಿವಿಲ್ ಹಾಗೂ ಕ್ರಿಮಿನಲ್ ಎರಡೂ ಕಾಯ್ದೆಗಳಿಗೆ ಒಳಪಟ್ಟಂತೆ ಕಾರ್ಯನಿರ್ವಹಿಸುವ ಅತ್ಯಂತ ಪರಿಣಾಮಕಾರಿಯಾದ ಕಾಯ್ದೆ ಎಂದರೆ ತಪ್ಪಾಗಲಾರದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ.ಕೆ, ಅಧಿಕಾರಿ ಸುಮಂಗಲ ಹಿರೇಮನಿ ಸೇರಿ ಇತರರಿದ್ದರು.