- ರಾಜಕಾರಣದಲ್ಲಿ ಧರ್ಮವಿರಲಿ ವಿನಾ ಧರ್ಮದಲ್ಲಿ ರಾಜಕಾರಣ ಬೇಡ: ಮಾಜಿ ಸಿಎಂ । ಲಿಂಗಸುಗೂರಲ್ಲಿ ದಸರಾ ದರ್ಬಾರ್ ಉದ್ಘಾಟನೆ ಕನ್ನಡಪ್ರಭ ವಾರ್ತೆ ಲಿಂಗಸುಗೂರು ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬಂತೆ ಅಧಿಕಾರ ಹೊಂದಿರುವ ಯಾವುದೇ ರಾಜಕೀಯ ಪಕ್ಷಗಳು ಇರಲಿ ಧರ್ಮಗಳ ತುಷ್ಠೀಕರಣ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪನವರು ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜೂ ಮೈದಾನದಲ್ಲಿ ಬಾಳೊಹೊನ್ನೂರು ರಂಬಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ, ಅನ್ನ ದಾಸೋಹದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಶರಣ, ಸಂತ-ಮಹಾಂತರು, ಮಠ-ಮಾನ್ಯಗಳು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿವೆ. ಜನರಿಗೆ ಸಂಸ್ಕಾರ ನೀಡುವ ಜೊತೆಗೆ ವಿದ್ಯೆ, ಬುದ್ದಿ ಕಾಯಕ ತತ್ವವನ್ನು ತಿಳಿಸಿ ಹೇಳುವ ಮೂಲಕ ಸದೃಢ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇದನ್ನು ಮನಗಂಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಠಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿದೆ ಎಂದು ಹೇಳಿದರು. ಪ್ರಪಂಚದಲ್ಲಿ ಅತಿ ಹೆಚ್ಚು ದಾಳಿಗೆ ಒಳಗಾದ ಧರ್ಮ ಎಂದರೇ ಹಿಂದು ಧರ್ಮವಾಗಿವೆ. ಆದರೆ ಎಲ್ಲಾ ಬಗೆಯ ದಾಳಿಗಳನ್ನು ಮೆಟ್ಟಿನಿಂತು ಇಂದಿಗೂ ದೇಶದಲ್ಲಿ ಸಂಸ್ಕಾರ, ಸಂಸ್ಕೃತಿ ಉಳಿವಿಗೆ ಸಂತ-ಮಹಾಂತರು, ಮಠಾಧೀಶರ ಕೊಡುಗೆ ಅಪಾರವಾಗಿದೆ. ಹಬ್ಬಗಳ ಆಚರಣೆ ಎಂದರೆ ಸಂಸ್ಕೃತಿ, ಸಂಸ್ಕಾರದ ಆಚರಣೆ ಅಗಿದೆ. ತಮ್ಮ ತಪ್ಪಸ್ಸಿನ ಶಕ್ತಿ, ಭಕ್ತಿಯಿಂದ ರಂಭಾಪುರಿ ಪೀಠವು ಮೈಸೂರಿನಂತೆ ಬಾಳೆಹೊನ್ನೂರು ದಸರಾ ದರ್ಬಾರ ನಡೆಸುವ ಮೂಲಕ ಈ ದೇಶದ ಸಂಸ್ಕೃತಿ ಆಚರಣೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಅಲ್ಲಮಪ್ರಭು, ಅಕ್ಕಮಹದೇವಿ ನಾಡಿನಿಂದ ಬಸವಣ್ಣನ ಕಲ್ಯಾಣ ನಾಡಿಗೆ ಬಂದು ಬಾಳೆಹೊನ್ನೂರು ಜಗದ್ಗುರುಗಳು ಲಿಂಗಸುಗೂರಲ್ಲಿ ಹಮ್ಮಿಕೊಂಡಿರುವ ಒಂಬತ್ತು ದಿನಗಳು ನಡೆಯುವ ದಸರಾ ದರ್ಬಾರ್ ಸಮಾರಂಭ ಉದ್ಘಾಟನೆ ಮಾಡಿರುವುದು ಜೀವನ ಸಾರ್ಥಕ ಎನಿಸಿದೆ ಸಮಾರಂಭ ಯಶಸ್ವಿಯಾಗಲಿ ಎಂದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಡಾ.ಮಾನಪ್ಪ ವಜ್ಜಲ್, ಲಕ್ಷ್ಮೀಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ವಿಶ್ವೇಶ್ವರಯ್ಯ ಹಿರೇಮಠ ಲಿಂಗಸುಗೂರು, ಮಲ್ಲಿಕಾರ್ಜುನ ಹೂಗಾರ ಗದಗ ಹಾಗೂ ಷಣ್ಮುಖಯ್ಯ ಹಿರೇಮಠ ಕಂಚಿನೆಗಳೂರು ಇವರಿಂದ ಭಕ್ತಿಗೀತೆ ಮತ್ತು ಶಿವಮೊಗ್ಗದ ಶಾಂತಾ ಆನಂದ ಸೇರಿದಂತೆ ಹರಗುರು ಚರಮೂರ್ತಿಗಳು, ರಾಜಕೀಯ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಫೋಟೋ15ಕೆಪಿಎಲ್ಎನ್ಜಿ02 ಲಿಂಗಸುಗೂರಿನಲ್ಲಿ ನಡೆದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳ ದಸರಾ ದರ್ಬಾರ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.