ಮೌಢ್ಯ, ಅಂಧ ಶ್ರದ್ಧೆಗಳ ದಾಸರಾಗಬೇಡಿ: ಡಾ.ಟಿ.ಬಿ. ಅಳ್ಳೊಳ್ಳಿ

| Published : Jan 31 2024, 02:15 AM IST

ಸಾರಾಂಶ

ಬಾಗಲಕೋಟೆ: ವಿದ್ಯಾರ್ಥಿಗಳು ಮೌಢ್ಯ ಹಾಗೂ ಅಂಧ ಶ್ರದ್ಧೆಗಳ ದಾಸರಾಗದೆ ವೈಜ್ಞಾನಿಕ ಚಿಂತನೆಗಳ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಡಾ.ಟಿ.ಬಿ. ಅಳ್ಳೊಳ್ಳಿ ಹೇಳಿದರು. ತೋವಿವಿ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡ ವೈಜ್ಞಾನಿಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾರ್ಥಿಗಳು ಮೌಢ್ಯ ಹಾಗೂ ಅಂಧ ಶ್ರದ್ಧೆಗಳ ದಾಸರಾಗದೆ ವೈಜ್ಞಾನಿಕ ಚಿಂತನೆಗಳ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಡಾ.ಟಿ.ಬಿ. ಅಳ್ಳೊಳ್ಳಿ ಹೇಳಿದರು.

ತೋವಿವಿ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡ ವೈಜ್ಞಾನಿಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಶರಣರು ವಿವರಿಸಿರುವ ಕೆಲ ಮೌಢ್ಯಾಚರಣೆಗಳನ್ನು ಹೋಗಲಾಡಿಸುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪಾ.ವಿ.ಕೆ ಮಾತನಾಡಿ, ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಕೆಲ ಮೌಢ್ಯ ಆಚರಣೆಗಳನ್ನು ತಿಳಿಸುತ್ತಾ ಇಂತಹ ಮೌಢ್ಯ ಆಚರಣೆಗಳಿಂದ ದೂರವಿರುವಂತೆ ಹಾಗೂ ಗಿಡಮರ ನೆಡುವುದರ ಮೂಲಕ ಪರಿಸರ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಸಿ. ಕಲ್ಯಾಣಿ ಮಾತನಾಡಿದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾಂತ್ರಿಕ ಸಹಾಯಕ ಆಸೀಫ್‌ ಬಾಗವಾನ ಅವರು ಕೆಲ ಪ್ರಾತ್ಯಕ್ಷಿಕೆಗಳ ಮೂಲಕ ಮೂಢನಂಬಿಕೆಗಳ ಹಿಂದಿನ ವೈಜ್ಞಾನಿಕ ಸತ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು.

ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ.ಆರ್. ಸುನ್ನೋಳ್ಳಿ, ಸಹ ಶಿಕ್ಷಕರಾದ ಉಮೇಶ ತಳವಾರ, ಅಶ್ವಿನಿ ಗೌಡರ, ಭಾರತಿ ಪಾಟೀಲ, ದ್ವಿ.ದ.ಸ ಗಂಗನಗೌಡ ಪಾಟೀಲ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಮಹಾನಂದಾ ಕಳಸನ್ನವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಈರಣ್ಣ ಬುಳ್ಳಾ, ನಿರೂಪಿಸಿ ವಂದಿಸಿದರು.