ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆ ಕುರಿತು ಫಲಾನುಭವಿಗಳು ಯಾವುದೇ ರೀತಿಯ ಗೊಂದಲಕ್ಕೀಡಾಗಬಾರದು. ಸದ್ಯಕ್ಕೆ ಈ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್‌.ಎಂ.ಮಧು ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಕುರಿತು ಸೋಷಿಯಲ್ ಮೀಡಿಯಾ ಮತ್ತು ಕೆಲವರು ಬದಲಾವಣೆ ಕುರಿತು ಮಾಹಿತಿ ಹರಿಬಿಡುತ್ತಿದ್ದಾರೆ. ಸರ್ಕಾರದಿಂದ ಇನ್ನೂ ಯಾವುದೇ ರೀತಿಯ ಆದೇಶಗಳು ಬಂದಿಲ್ಲ. ಆದೇಶ ಬರುವವರೆಗೆ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಅಥವಾ ಬ್ಯಾಂಕ್ ಖಾತೆ ಜೋಡಣೆ ಸಮಸ್ಯೆಯಿಂದ ಬಾಕಿ ಉಳಿದಿರುವ ಮಹಿಳೆಯರ ಖಾತೆಗಳಿಗೆ ಶೀಘ್ರವಾಗಿ ಹಣ ಜಮಾ ಆಗಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಬಾಕಿ ಇರುವ ಅರ್ಜಿಗಳನ್ನು ತಕ್ಷಣವೇ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕಿನಲ್ಲಿ ಈವರೆಗೆ 1,08,232 ಫಲಾನುಭವಿಗಳು ನೋಂದಣಿಯಾಗಿದ್ದು, 42 ಫಲಾನುಭವಿಗಳ ಎನ್‌ಪಿಸಿಐ ಬಾಕಿ ಇದೆ. 2044 ಐಟಿ/ಜಿಎಸ್‌ಜಿ ಫಲಾನುಭವಿಗಳಿದ್ದು ೩೦೪ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮರಣ ಹೊಂದಿರುವ ಬಗ್ಗೆ 332 ಅರ್ಜಿ ಸ್ವೀಕರಿಸಲಾಗಿದೆ ಎಂದರು.


ಪಡಿತರ ಚೀಟಿ ಪರಿಷ್ಕರಣೆ ವೇಳೆ ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವ ೪,೧೫೦ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಅರ್ಹರಾಗಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಅಥವಾ ತಪ್ಪು ಮಾಹಿತಿಯಿಂದ ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡುಗಳಾಗಿ ಬದಲಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ ೪೫ ದಿನಗಳ ಕಾಲಾವಕಾಶ ನೀಡಿದೆ. ಆದರೆ ಈ ಗ್ರೇಸ್ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ತಾಲೂಕಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿರುವ ಗ್ರಾಹಕರ ವಿವರಗಳನ್ನು ಪಡೆದ ಅಧ್ಯಕ್ಷರು, ತಾಂತ್ರಿಕ ದೋಷಗಳಿಂದ ವಂಚಿತರಾದ ಗ್ರಾಹಕರ ಸಮಸ್ಯೆಗಳನ್ನು ಮೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹರಿಸಬೇಕು. ಹಾಗೂ ಕಮರ್ಷಿಯಲ್‌ಗಾಗಿ ಯಾರಾದರೂ ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ ರದ್ದುಪಡಿಸಬೇಕೆಂದರು. ಯುವನಿಧಿ ಮತ್ತು ಶಕ್ತಿ ಯೋಜನೆ: ಪದವಿ ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕ- ಯುವತಿಯರಿಗೆ ಭತ್ಯೆ ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ತಾಲೂಕಿನಲ್ಲಿ ಈವರೆಗೆ 38,088 ಫಲಾನುಭವಿಗಳಿಗೆ ₹10.36 ಕೋಟಿ ಹಣವನ್ನು ಜಮಾ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಯಶಸ್ವಿ ಅನುಷ್ಠಾನದ ಕುರಿತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಶಾಲಾ- ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಆರ್. ಶಿವಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಸುತ್ತೋಲೆಗಳು ಬಂದಲ್ಲಿ ತಮ್ಮ ಗಮನಕ್ಕೆ ತರಬೇಕು. ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಗೊಂದಲಕ್ಕೀಡಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲೂಕು ಇಒ ಪರಮೇಶ್ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.