ಹಣ, ಅಧಿಕಾರದ ಹುಚ್ಚು ಹಿಡಿಯಬಾರದು

| Published : Jan 01 2024, 01:15 AM IST

ಸಾರಾಂಶ

ಮನುಷ್ಯನಿಗೆ ಹಣ, ಅಧಿಕಾರದ ಹುಚ್ಚು ಹಿಡಿಯಬಾರದು. ಅವುಗಳನ್ನು ಮಣ್ಣಲ್ಲಿ ಮುಚ್ಚಿ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಸಮಾಜದಲ್ಲಿ ಗೌರವ ಮನ್ನಣೆ ಸಿಗಲಿದೆ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಮನುಷ್ಯನಿಗೆ ಹಣ, ಅಧಿಕಾರದ ಹುಚ್ಚು ಹಿಡಿಯಬಾರದು. ಅವುಗಳನ್ನು ಮಣ್ಣಲ್ಲಿ ಮುಚ್ಚಿ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಸಮಾಜದಲ್ಲಿ ಗೌರವ ಮನ್ನಣೆ ಸಿಗಲಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹುಚ್ಚೇಶ್ವರ ಮಹಾಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಇಷ್ಠಲಿಂಗ ಮಹಾಪೂಜೆ, ರುದ್ರಪಠಣ, ಸಿದ್ಧಾಂತ ಶಿಖಾಮಣಿ ಪಾರಾಯಣ, ೨ನೇ ದಿನದ ಜನ ಜಾಗೃತಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ನನ್ನದು, ಇಲ್ಲಿಲ್ಲ ಯಾರದು ಎಂಬ ತತ್ವ ಸಿದ್ಧಾಂತದ ಮೇಲೆ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮನುಷ್ಯ ಸ್ವರ್ಗದ ದಾರಿ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ನಿಂಗರಾಜ ಕರಕಣ್ಣವರ ಮಾತನಾಡಿ, ಮನುಷ್ಯನ ಜಂಜಾಟದ ಬದುಕಿಗೆ ಮಠ, ಮಂದಿರಗಳು ನೆಮ್ಮದಿ ನೀಡುವ ತಾಣಗಳಾಗಿವೆ. ಮಠಾಧೀಶರು ಸಮಾಜದಲ್ಲಿ ಧರ್ಮಬೋಧನೆಯಂತಹ ಕಾರ್ಯ ಮಾಡದೇ ಇದ್ದರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತದೆ ಎಂದು ಹೇಳಿದರು.

ಸಭೆಯ ಸಾನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವೀರಕ್ತಮಠದ ಶ್ರೀ ಚನ್ನವೀರ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ, ಸಂಸ್ಕಾರವಂತ ಭಕ್ತರಿಗೆ ಮಾತ್ರ ಗುರು ಕಾರುಣ್ಯ ದೊರೆಯಲಿದೆ. ಅಂತಹ ಮಹತ್ವಪೂರ್ಣ ಕಾರ್ಯವನ್ನು ಶ್ರೀ ಹುಚ್ಚೇಶ್ವರ ಸೇವಾ ಸಮಿತಿಯವರು ಪ್ರತಿವರ್ಷ ಮಠಾಧೀಶರಿಂದ ಧರ್ಮಬೋಧನೆ ಮಾಡಿಸುವ ಮೂಲಕ ಜನರನ್ನು ಜಾಗೃತರನ್ನಾಗಿ ಮಾಡುತ್ತಿದ್ದಾರೆ. ಇಂದಿನ ಯುವಸಮೂಹ ೪ಜಿ, ೫ಜಿ ಬೆನ್ನುಹತ್ತಿ ಮಾತಾ, ಪಿತಾ, ಗುರುಗಳ ಸಂದೇಶವನ್ನು ಪಾಲಿಸದೇ ಇರುವುದು ನೋವಿನ ಸಂಗತಿಯಾಗಿದೆ. ನಮ್ಮಲ್ಲಿ ಮೊಬೈಲ್ ಸೆಟ್ ಇದೆ. ಸೊಪಾ ಸೆಟ್, ಟಿವಿ ಸೆಟ್ ಇದೆ ಹೀಗೆ ಅತ್ಯಾಧುನಿಕ ಸೌಲಭ್ಯಗಳೂ ಇದ್ದರೂ, ಮೈಂಡ್ ಮಾತ್ರ ಅಪಸೆಟ್ ಆಗಿದೆ. ಆ ಮೈಂಡ್ ರಿಫ್ರೇಶ್‌, ರಿಚಾರ್ಜ್‌ ಆಗಬೇಕಾದರೆ, ಇಂತಹ ಧರ್ಮ ಸಂದೇಶವನ್ನು ಕೇಳಿ ಮೈಗೂಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ಹೋತನಹಳ್ಳಿ ಶ್ರೀ ಸಿಂಧಗಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ನೆಗಳೂರಿನ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು, ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣ್ಣಜ್ಜ ಮಹಾಸ್ವಾಮಿಗಳು ಸಭೆಯ ಸಾನಿಧ್ಯ ವಹಿಸಿದ್ದರು. ಕಸಾಪ ಹೊಬಳಿ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ, ನಿಂಗನಗೌಡ್ರ ಪಾಟೀಲ, ಸಿದ್ದಪ್ಪ ಹರವಿ, ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ರಮೇಶ ಸಿದ್ದುನವರ, ಸುರೇಶ ಕುರಗೋಡಿ, ಮಾಲತೇಶ ಕಲಾಲ, ಕೋಟೆಪ್ಪ ಸಕ್ರಿ, ಕಲ್ಲಪ್ಪ ಹರವಿ, ಬಿ.ಡಿ. ಮಾದಮ್ಮನವರ, ಶಿವನಗೌಡ ಪಾಟೀಲ, ಗಂಗಾಧರ ಪೂಜಾರ, ಗುಳಪ್ಪ ಪ್ಯಾಟಿ ಸೇರಿದಂತೆ ಇತರರು ಇದ್ದರು. ಸುಮಂಗಲಾ ಶೆಟ್ಟರ ಪ್ರಾರ್ಥಿಸಿದರು. ಬಸವರಾಜ ನಾರಾಯಣಪುರ ಸ್ವಾಗತಿಸಿದರು. ಶಿಕ್ಷಕ ಎಂ.ಬಿ .ಉಂಕಿ ನಿರೂಪಿಸಿದರು.