ಜಾಹಿರಾತಿಗೆ ಮರುಳಾಗದೆ ಗುಣಮಟ್ಟ ನೋಡಿ ಖರೀದಿಸಿ

| Published : Mar 17 2025, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಮೋಸಗಳಿಗೆ ಒಳಗಾಗದೇ, ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ಹಾಗೂ ನಿಗದಿತ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಮೋಸಗಳಿಗೆ ಒಳಗಾಗದೇ, ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ಹಾಗೂ ನಿಗದಿತ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ ಎನ್ನುವ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರ ಹಕ್ಕುಗಳ ಕಾಯ್ದೆ ಜಾರಿಯಾದ ಕಾರಣ ಸಹಿತ ವಿವರಿಸಿ ಪ್ರತಿಯೊಂದು ಗ್ರಾಹಕರು ಮೋಸಕ್ಕೊಳಗಾಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಬೇಕು. ಅಲ್ಲದೇ ಯಾವುದೇ ವಸ್ತುಗಳನ್ನು ಖರೀದಿಸಿದರೆ ಗರಿಷ್ಟ ಚಿಲ್ಲರೆ ದರಕ್ಕಿಂತ ಹೆಚ್ಚಿಗೆ ಪಾವತಿ ಮಾಡಬಾರದು. ಗ್ರಾಹಕ ಎಚ್ಚೆತ್ತುಕೊಂಡು ಮೋಸ ಹೋಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಿದಲ್ಲಿ ಸುಸ್ಥಿರ ಜೀವನಶೈಲಿಗೆ ಸರಳ ಪರಿವರ್ತನೆಯಾದಂತೆ ಎಂದು ಅವರು ಅಭಿಪ್ರಾಯಪಟ್ಟರು.

ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ.ಎಸ್.ಹಾಗರಗಿ ಮಾತನಾಡಿ, ಗ್ರಾಹಕರಿಗೆ ಇರುವ ಹಕ್ಕುಗಳು ಮತ್ತು ಪ್ರಸ್ತುತ ಗ್ರಾಹಕರ ಕಾಯ್ದೆಯಡಿ ಇರುವ ಸೇವಾ ಇಲಾಖೆಗಳು, ಹಕ್ಕುಗಳು, ಕರ್ತವ್ಯಗಳ ಕುರಿತು ಪ್ರತಿಯೊಬ್ಬ ಗ್ರಾಹಕರು ಅರಿತುಕೊಳ್ಳಬೇಕು. ಮೋಸಕ್ಕೊಳಗಾದ ಸಂದರ್ಭದಲ್ಲಿ ಮೊಸಕ್ಕೊಳಗಾದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ನೀಡಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಮುಂದೆ ಪ್ರಕರಣದಲ್ಲಿ ಪರಿಹಾರವನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಂ.ಜಿ.ಮಠಪತಿ ಮಾತನಾಡಿ, ಗ್ರಾಹಕರಿಗೆ ದೈನಂದಿನ ಬದುಕಿನಲ್ಲಿ ಆಹಾರ ಇತ್ಯಾದಿ ವಸ್ತುಗಳ ಖರೀದಿಯಲ್ಲಿ ಆಗುತ್ತಿರುವ ಮೋಸಗಳ ಬಗ್ಗೆ ವಿವರವಾಗಿ ವಿವರಿಸಿದರು. ಗ್ರಾಹಕರ ಕಾಯ್ದೆ ಜಾರಿಯಾದ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಮಾತನಾಡಿ, ಆಹಾರ ಸುರಕ್ಷತೆಯ ಕುರಿತು ಪಿಪಿಟಿ ಚಿತ್ರಣ ಮೂಲಕ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ವಿದ್ಯಾ ಗಲಗಲಿ(ಮುತಾಲಿಕ ದೇಸಾಯಿ) ವಹಿಸಿದ್ದರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಸ್ವಾಗತಿಸಿದರು. ನಾಮದೇವ ಚವ್ಹಾಣ ವಂದಿಸಿದರು. ಎಸ್.ಎಂ.ಕರೇಕಲ್ಲ, ಡಿ.ಆರ್‌.ನಾಯ್ಕೋಡಿ, ಡಿ.ಆರ್‌.ಚೌಗಲಾ ಸೇರಿದಂತೆ ಆಹಾರ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.