ಮಾದಕ ವಸ್ತುಗಳಿಗೆ ದಾಸರಾಗದಿರಿ: ನ್ಯಾಯಾಧೀಶೆ ಶ್ರೀಶೈಲಜಾ ಎಚ್.ವಿ.

| Published : Sep 20 2025, 01:02 AM IST

ಸಾರಾಂಶ

ಯುವಕರು ಓದಿನ ಜತೆಗೆ ಕ್ರೀಡೆ ಹಾಗೂ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು.

ಹಾವೇರಿ: ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಜನತೆ ಮಾದಕ ವಸ್ತುಗಳಿಗೆ ದಾಸರಾಗದೇ ಅಮೂಲ್ಯ ಜೀವನ ಕಾಪಾಡಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ತಿಳಿಸಿದರು.ತಾಲೂಕಿನ ಕಳ್ಳಿಹಾಳ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಕಳ್ಳಿಹಾಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯು ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ತಡೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು, ಆತ್ಮಹತ್ಯೆ ತಡೆ, ಪೋಕ್ಸೊ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವಕರು ಓದಿನ ಜತೆಗೆ ಕ್ರೀಡೆ ಹಾಗೂ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಆತ್ಮಹತ್ಯೆ ಹಾಗೂ ಪೋಕ್ಸೊ ಪ್ರಕರಣಗಳ ತಡೆಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ. ಪೋಕ್ಸೊ ಕಾಯ್ದೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಹಾಗೂ ಈ ಪ್ರಕರಣದ ತಡೆಗೆ ಎಲ್ಲರೂ ಶ್ರಮಿಸಬೇಕು ಎಂದರು.ಪ್ರಸ್ತುತ ನಡೆಯುತ್ತಿರುವ 90 ದಿನಗಳ ಮಧ್ಯಸ್ಥಿಕೆ ಅಭಿಯಾನವನ್ನು ಅ. 7ರ ವರೆಗೂ ಹಮ್ಮಿಕೊಳ್ಳಲಾಗಿದೆ. ಕಾಯಂ ಜನತಾ ನ್ಯಾಯಾಲಯದಲ್ಲಿಯೂ ಯಾವುದೇ ಖರ್ಚು ಇಲ್ಲದೆ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಘರ್ ಘರ್ ಮೇ ನ್ಯಾಯ ಕೀ ಜಾಗೃತಿ ಎಂಬ ಘೋಷವಾಕ್ಯದೊಂದಿಗೆ ಜನಸಾಮಾನ್ಯರಿಗೆ ಉಚಿತ ಕಾನೂನು ಅರಿತು ಮತ್ತು ನೆರವು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಜನಜಾಗೃತಿ ಸಮಿತಿ ಸಹ ರಚಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಏನಾದರೂ ಸಮಸ್ಯೆಗಳಲ್ಲಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ಸಂಕ್ಯೆ 15100 ಸಂಪರ್ಕಿಸಬಹುದು ಎಂದರು ಹಾಗೂ ಕಾನೂನು ನೆರವಿನ ಪ್ರಚಾರ ಸಾಮಗ್ರಿಗಳನ್ನು ವಿತರಿಸಿದರು. ಉಪ ಕಾನೂನು ನೆರವು ಅಭಿರಕ್ಷಣಾ ವಕೀಲ ಎಂ.ಸಿ. ಭರಮಣ್ಣನವರ ಅವರು ಮಾದಕ ವಸ್ತು ತಡೆ ಹಾಗೂ ಪೋಕ್ಸೊ ಕಾಯ್ದೆ ಬಗ್ಗೆ ಹಾಗೂ ಮನೋವೈದ್ಯೆ ಡಾ. ಶೃತಿ ಅವರು ಆತ್ಮಹತ್ಯೆ ತಡೆ ಕುರಿತು ಉಪನ್ಯಾಸ ನೀಡಿದರು. ಕಳ್ಳಿಹಾಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಡಿ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.