ಕಲ್ಲುಕ್ವಾರೆ ಬಗೆಗಿನ ಅಪಪ್ರಚಾರಕ್ಕೆ ಮನ್ನಣೆ ನೀಡಬೇಡಿ

| Published : Dec 16 2024, 12:46 AM IST

ಸಾರಾಂಶ

ಕಾರ್ಮಿಕ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವ ಸ್ಥಿತಿ ನಿರ್ಮಾಣ: ಸುರೇಶಕುಮಾರ್

ಕನ್ನಡಪ್ರಭ ವಾರ್ತೆ ಸಾಗರ

ಕೆಲವರು ಮಾಡುತ್ತಿರುವ ಅಪಪ್ರಚಾರದಿಂದ ಕಾನೂನುಬದ್ಧವಾಗಿ ನಡೆಸುತ್ತಿರುವ ಕಲ್ಲುಕ್ವಾರೆ ಚಟುವಟಿಕೆಗಳು ನಿಂತಿದ್ದು, ಅದನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಲ್ಲುಕ್ವಾರೆ ಹಿತರಕ್ಷಣಾ ಸಮಿತಿಯ ಸುರೇಶಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕಲ್ಲುಕ್ವಾರೆಯನ್ನು ಏಕಾಏಕಿ ನಿಲ್ಲಿಸಿದ್ದರಿಂದ ಕಲ್ಲುಕ್ವಾರೆ ನಡೆಸುತ್ತಿರುವವರು ಹಾಗೂ ಅದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೆಲವರು ಕಲ್ಲುಕ್ವಾರೆ ವಿರುದ್ಧ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳಿಗೆ, ಪೊಲೀಸರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಮೂಲಿ ಕೊಡುತ್ತಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಅಧಿಕಾರಿಗಳು ನಮಗೆ ತೊಂದರೆ ಕೊಡುತ್ತಿದ್ದಾರೆ. ನಾವ್ಯಾರು ಹಣವನ್ನು ಕೊಡುತ್ತಿಲ್ಲ. ಅಧಿಕಾರಿಗಳು ಬಂದು ನಮ್ಮ ಬಳಿ ಹಣಕ್ಕಾಗಿ ಪೀಡಿಸುತ್ತಿಲ್ಲ. ನಾವು ಲಾಗಾಯ್ತಿನಿಂದ ಕಲ್ಲು ಕೀಳುವ, ಸಾಗಿಸುವ, ಮಾರಾಟ ಮಾಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಜೀವನಕ್ಕೆ ಆಧಾರವೂ ಹೌದು. ಯಾರಿಗೂ ಲಂಚ ಕೊಡುವ ಸ್ಥಿತಿಯಲ್ಲಿ ನಾವಿಲ್ಲ. ಅಧಿಕಾರಿಗಳು ಅಪಪ್ರಚಾರಕ್ಕೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.

ಅರುಣಕುಮಾರ್ ಮಾತನಾಡಿ, ಆನಂದಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ತಲತಲಾಂತರದಿಂದ ಕಲ್ಲುಕ್ವಾರೆ ನಡೆಯುತ್ತಿದೆ. ಮಹಂತಿನ ಮಠ, ಕೋಟೆ ಇನ್ನಿತರೆಗಳನ್ನು ಜಂಬಿಟ್ಟಿಗೆ ಕಲ್ಲಿನಿಂದ ಕಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನೂರಾರು ಕುಟುಂಬಗಳು ಕಲ್ಲುಕ್ವಾರೆಯಿಂದ ಬರುವ ಆದಾಯ ಅವಲಂಭಿಸಿಕೊಂಡು ಬದುಕು ನಡೆಸುತ್ತಿದೆ. ಕಳೆದ ಆರು ತಿಂಗಳಿಂದ ಕೆಲವರು ಮಾಡುವ ಅಪಪ್ರಚಾರಕ್ಕೆ ಅಧಿಕಾರಿಗಳು ಕಲ್ಲುಕ್ವಾರೆಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಆದಾಯ ಇಲ್ಲದೆ ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಅಪಪ್ರಚಾರಗಳಿಗೆ ಕಿವಿಗೊಡದೆ ನಮಗೆ ಹಿಂದಿನಂತೆ ಕಲ್ಲುಕ್ವಾರೆ ನಡೆಸಲು ಅವಕಾಶ ಮಾಡಿಕೊಡಬೇಕು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಗೇಶ್, ರವಿ, ಇಬ್ರಾಹಿಂ, ಚಂದ್ರು, ಶೇಖ್ ಫಾಜಲ್, ಶಿವರಾಜ್, ನಾಗರಾಜ್, ರಾಜು, ರಫೀಕ್ ಇನ್ನಿತರರು ಹಾಜರಿದ್ದರು.