ಸಾರಾಂಶ
ಶಿರಾ ಕಲ್ಲುಕೋಟೆ ಸರ್ವೇ ನಂ. 216/1ರಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಿವೇಶನಗಳನ್ನು ರದ್ದು
ಕನ್ನಡಪ್ರಭ ವಾರ್ತೆ ಶಿರಾ ಶಿರಾ ಕಲ್ಲುಕೋಟೆ ಸರ್ವೇ ನಂ. 216/1ರಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಿವೇಶನಗಳನ್ನು ರದ್ದು ಮಾಡಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿವೇಶನಗಳನ್ನು ಖರೀದಿ ಅಥವಾ ಪರಭಾರೆ ಮಾಡಬಾರದು ಎಂದು ನಗರ ಸಭೆ ಸದಸ್ಯ ಲಕ್ಷ್ಮೀಕಾಂತ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಲೇಔಟ್ ನಿರ್ಮಿಸಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿತ್ತು. ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಶಿರಾ ಪೌರಾಯುಕ್ತರು ಅಕ್ರಮ ಖಾತೆಗಳನ್ನು ರದ್ದುಪಡಿಸಿದ್ದಾರೆ. ಕಲ್ಲುಕೋಟೆ ಸರ್ವೇ ನಂ. 216/1ರಲ್ಲಿ ಶಿರಾ ರಂಗನಾಥ ನಗರದ ರಂಗಯ್ಯ ಎಂಬುವವರಿಗೆ 5 ಎಕರೆ 39 ಗುಂಟೆ ಜಮೀನು ಮಂಜೂರಾಗಿತ್ತು. ರಂಗಯ್ಯ ಎಂಬುವವರು ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ್ದು, ರಂಗಯ್ಯ ತಮ್ಮ ಕುಟುಂಬದ ಹಣಕಾಸಿನ ಸಮಸ್ಯೆಯಿಂದ ಪಚ್ಚೆಗೌಡ ಎಂಬುವವರಿಗೆ ಜಮೀನನ್ನು ಅಡಮಾನ ಮಾಡಿದ್ದು, ಆ ಜಮೀನನ್ನು ಪಚ್ಚೆಗೌಡ ಎಂಬುವವರು ಕಣೆಕಲ್ಲಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಆ ನಂತರ ಕಣೆಕಲ್ಲಪ್ಪ ಅವರು ಅಕ್ರಮವಾಗಿ ನಿವೇಶನವನ್ನು ಮಾಡಿದ್ದಾರೆ. ಮೂಲ ಜಮೀನಿನ ಮಾಲಿಕ ರಂಗಯ್ಯ ಅವರ ಮಗನಾದ ನಾಗರಾಜು ಅವರು ೨೦೦೯ರಲ್ಲಿ ಪಿಟಿಸಿಎಲ್ ಕಾಯ್ದೆ ಅನುಸಾರ ತಮ್ಮ ಪಿತ್ರಾರ್ಜಿತ ಜಮೀನನ್ನು ಬಿಡಿಸಿಕೊಡುವಂತೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣವು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಸಾರ್ವಜನಿಕರು ಈ ಜಮೀನಿನಲ್ಲಿ ಯಾವುದೇ ನಿವೇಶನ, ಮನೆಗಳನ್ನು ಕೊಂಡುಕೊಳ್ಳುವುದಾಗಲಿ, ಪರಭಾರೆ ಮಾಡುವುದಾಗಲಿ ಮಾಡಬಾರದು ಎಂದರು.ಕರ್ನಾಟಕ ರಾಜ್ಯ ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ರಾಜ್ಯ ಖಜಾಂಚಿಯಾದ ಮಂಜುನಾಥ್ ಮಾತನಾಡಿ, ಪಿಟಿಸಿಎಲ್ ಕಾಯ್ದೆಯ ಪರವಾಗಿ ನಮ್ಮ ಸಂಘಟನೆಯಿಂದ ಫ್ರೀಡಂ ಪಾರ್ಕ್ನಲ್ಲಿ 208 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪಿಟಿಸಿಎಲ್ ಕಾಯ್ದೆಗೆ ಯಾವುದೇ ಕಾಲಮಿತಿ ಇಲ್ಲ ಎಂದು ತಿದ್ದುಪಡಿ ಮಾಡಿದೆ. ಈ ಹಿನ್ನೆಲೆಯಲ್ಲಿ ಶಿರಾ ರಂಗನಾಥ ನಗರದ ನಾಗರಾಜು ಎಂಬುವವರಿಗೆ ಸೇರಿದ ಜಮೀನಿನನ್ನು ಅಕ್ರಮವಾಗಿ ಪರಭಾರೆ ಮಾಡಿ, ಅಕ್ರಮವಾಗಿ ಬಡಾವಣೆ ಮಾಡಿ ನಿವೇಶನ ಹಂಚಿದ್ದು, ನಮ್ಮ ಸಂಘಟನೆ ನಾಗರಾಜು ಅವರ ಪರವಾಗಿ ಹೋರಾಟ ಮಾಡಲಿದ್ದೇವೆ ಎಂದರು.
ರಾಜ್ಯ ಮಾದಿಗ ಮಹಾಸಭಾದ ಎಸ್.ಆರ್.ರಂಗನಾಥ್ ಮಾತನಾಡಿ, ಅಕ್ರಮವಾಗಿ ಖಾತೆ ಮಾಡಿ ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ನಾವು ಹೋರಾಟ ಮಾಡುತ್ತೇವೆ. ಅಕ್ರಮವಾಗಿ ಮಾಡಿರುವ ಖಾತೆಗಳನ್ನು ವಜಾ ಮಾಡಿರುವ ನಗರಸಭೆ ಪೌರಾಯುಕ್ತರ ವಿರುದ್ಧ ರಾಜಕೀಯ ಮುಖವಾಡ ಧರಿಸಿರುವ ಪ್ರಭಾವಿ ರಾಜಕಾರಣಿಗಳು ಷಡ್ಯಂತ್ರ ಮಾಡುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಮೀನಿನ ನಾಗರಾಜು, ಮಣಿ, ದಸಂಸ ತಾಲೂಕು ಅಧ್ಯಕ್ಷ ಗಜಮಾರನಹಳ್ಳಿ ನಾಗರಾಜು, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.