ಸಾರಾಂಶ
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಎಚ್ಚರಿಕೆಯ ನಡುವೆಯೂ ವಿ.ಹರ್ಷ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸುವ ಮೂಲಕ ಡಾ.ಮಹೇಶ್ ಜೋಶಿ ವಿರುದ್ಧ ತೊಡೆ ತಟ್ಟಿದ್ದಾರೆ.
ಮಂಡ್ಯ : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಎಚ್ಚರಿಕೆಯ ನಡುವೆಯೂ ವಿ.ಹರ್ಷ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸುವ ಮೂಲಕ ಡಾ.ಮಹೇಶ್ ಜೋಶಿ ವಿರುದ್ಧ ತೊಡೆ ತಟ್ಟಿದ್ದಾರೆ.
ವಿ.ಹರ್ಷ ಹಾಗೂ ಗಾಮನಹಳ್ಳಿ ಮಹದೇವಸ್ವಾಮಿ ಅವರು ಸ್ವಯಂ ಘೋಷಿತ ಜಿಲ್ಲಾ ಕಸಾಪ ಅಧ್ಯಕ್ಷರು ಮತ್ತು ಗೌರವ ಕಾರ್ಯದರ್ಶಿಗಳಾಗಿ ಘೋಷಿಸಿಕೊಂಡಿದ್ದು, ಅವರು ಶುಕ್ರವಾರ (ಫೆ.22 ) ಕರೆದಿರುವ ಸಭೆ ಕಾನೂನುಬಾಹಿರ. ಸಭೆಯನ್ನು ನಡೆಸುವವರು, ಪಾಲ್ಗೊಳ್ಳುವವರೂ ಅಪರಾಧಿಗಳಾಗುವರು ಎಂಬ ಎಚ್ಚರಿಕೆಯನ್ನು ಕೇಂದ್ರ ಸಾಹಿತ್ಯ ಪರಿಷತ್ತು ನೀಡಿತ್ತು.
ಕೇಂದ್ರ ಸಾಹಿತ್ಯ ಪರಿಷತ್ತು ನೀಡಿದ ಎಚ್ಚರಿಕೆಯನ್ನು ಲೆಕ್ಕಿಸದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸುವ ಮೂಲಕ ರಾಜ್ಯಾಧ್ಯಕ್ಷರಿಗೆ ಸವಾಲು ಎಸೆದಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗಿರುವ ನಿರ್ಣಯದಂತೆ ವಿ.ಹರ್ಷ ಅವರೇ ಅಧ್ಯಕ್ಷರು, ಗಾಮನಹಳ್ಳಿ ಮಹದೇವಸ್ವಾಮಿ ಗೌರವ ಕಾರ್ಯದರ್ಶಿಗಳಾಗಿದ್ದು, ಅವರ ನೇತೃತ್ವದಲ್ಲೇ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ನಡೆಸುವುದಕ್ಕೆ ನಿರ್ಧರಿಸಿದ್ದಾರೆ.
ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಗೆ ತಾಲೂಕು ಮತ್ತು ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ 40 ಮಂದಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ತಾಲೂಕು ಮತ್ತು ಹೋಬಳಿ ಘಟಕಗಳ ಮುಂದಿನ ಕಾರ್ಯಕ್ರಮಗಳ ರೂಪು-ರೇಷೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಕಳೆದೊಂದು ವರ್ಷದಿಂದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ನಿಂತ ನೀರಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೆರವಿನೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕನ್ನಡದ ಚಟುವಟಿಕೆಗಳು ನಿಲ್ಲಬಾರದು. ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ನಿರ್ಧರಿಸಲಾಯಿತು.
ಪ್ರತಿ ತಿಂಗಳು ನಾಲ್ಕನೇ ಶನಿವಾರ ಸಭೆ ನಡೆಸಲಾಗುವುದು. ಪರಿಷತ್ತಿನ ವತಿಯಿಂದ ನಡೆಸಲಾಗುವ ಪ್ರತಿ ಕಾರ್ಯಕ್ರಮದ ವಿವರಗಳನ್ನು ರಾಜ್ಯಾಧ್ಯಕ್ಷರಿಗೆ ಕಳುಹಿಸುವುದು. ಜಿಲ್ಲಾ ಕಾರ್ಯಕಾರಿ ಸಮಿತಿ ಕೈಗೊಂಡಿರುವ ಅಧ್ಯಕ್ಷರು-ಗೌರವ ಕಾರ್ಯದರ್ಶಿಗಳ ಆಯ್ಕೆಯ ನಿರ್ಣಯವನ್ನು ಅನುಮೋದನೆಗೆ ಮತ್ತೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಲಾಗುವುದು. ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಜಿಲ್ಲಾ ಸಮಿತಿ ಪುನಾರಚನೆಗೆ ಮುಂದಾದರೆ ಸಂಪೂರ್ಣ ಸಹಕಾರ ನೀಡುವುದು. ಇಲ್ಲದಿದ್ದರೆ ಪರಿಷತ್ತಿನ ಕಾರ್ಯಕ್ರಮಗಳನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗುವುದಕ್ಕೆ ತೀರ್ಮಾನಿಸಲಾಯಿತು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಯಾದ ಅನುದಾನದಲ್ಲಿ ೧೫ ಲಕ್ಷ ರು. ಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ದೊರಕಿಸಬೇಕಿದೆ. ಅದನ್ನು ರಾಜ್ಯಾಧ್ಯಕ್ಷರು ಶೀಘ್ರ ನೀಡುವುದು. ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತಂತೆ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ನಿರ್ಧರಿಸಲಾಯಿತು.
ಮೀರಾ ಶಿವಲಿಂಗಯ್ಯ ಸಭೆಗೆ ಹಾಜರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗೆ ಆಗಮಿಸುವಂತೆ ಆಹ್ವಾನಿಸಲಾಗಿತ್ತು. ಸಭೆಗೆ ಹಾಜರಾಗಿದ್ದ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುವುದಕ್ಕೆ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ತೊಡಕಾಗದಂತೆ ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಇದಕ್ಕೆ ಎಲ್ಲರೂ ಸಂಪೂರ್ಣವಾಗಿ ಸಹಕಾರ ನೀಡುವಂತೆ ಮನವಿ ಮಾಡಿ ಸಭೆಯಿಂದ ಅರ್ಧಕ್ಕೆ ಹೊರನಡೆದರು.
ಈ ಸಭೆ ಯಾರ ವಿರುದ್ಧವೂ ಶಕ್ತಿ ಪ್ರದರ್ಶನ ನಡೆಸುವ ಸಭೆಯಲ್ಲ. ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಅಧ್ಯಕ್ಷರನ್ನಾಗಿ ವಿ.ಹರ್ಷ ಮತ್ತು ಗೌರವ ಕಾರ್ಯದರ್ಶಿಯಾಗಿ ಗಾಮನಹಳ್ಳಿ ಮಹದೇವಸ್ವಾಮಿ ಅವರನ್ನು ಆಯ್ಕೆ ಮಾಡಿ ಕೇಂದ್ರ ಸಮಿತಿ ಅನುಮೋದನೆಗೆ ಕಳುಹಿಸಿ ಒಂದು ತಿಂಗಳಾಗಿದೆ. ಇದುವರೆಗೂ ಅನುಮೋದನೆ ನೀಡಿಲ್ಲ. ಕಾಸರಗೋಡು ಅಧ್ಯಕ್ಷರು ಮೃತರಾದ ಎರಡನೇ ತಿಂಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸಲಾಯಿತು. ಮಂಡ್ಯ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ. ನಾವು ಸಭೆ ಕರೆದಿದ್ದಕ್ಕೆ ಪತ್ರ ಮೂಲಕ ಎಚ್ಚರಿಕೆ ನೀಡುವ ಕೇಂದ್ರ ಪರಿಷತ್ತು, ಅಧ್ಯಕ್ಷರಿಲ್ಲದೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿಂತ ನೀರಾಗಿರುವ ಬಗ್ಗೆ ಧ್ವನಿ ಏಕೆ ಎತ್ತುತ್ತಿಲ್ಲ?.
- ಗಾಮನಹಳ್ಳಿ ಮಹದೇವಸ್ವಾಮಿ, ಪರಿಷತ್ತಿನ ಪದಾಧಿಕಾರಿ
ರಾಜ್ಯಾಧ್ಯಕ್ಷರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಪುನಾರಚನೆಗೆ ಶೀಘ್ರ ಮುಂದಾಗಬೇಕು. ಇಲ್ಲದಿದ್ದರೆ ಜಿಲ್ಲಾ ಸಮಿತಿಯ ಕಾರ್ಯಚಟುವಟಿಕೆಗಳನ್ನು ಕಾರ್ಯಕಾರಿ ಸಮಿತಿ ತನ್ನದೇ ತೀರ್ಮಾನದಂತೆ ಮುಂದುವರೆಸಲಿದೆ. ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಸಾಹಿತ್ಯದ ಚಟುವಟಿಕೆಗಳು ಜಿಲ್ಲೆಯೊಳಗೆ ಚುರುಕುಗೊಳ್ಳಬೇಕು. ನವೀನ ಕಾರ್ಯಕ್ರಮಗಳೊಂದಿಗೆ ಪರಿಷತ್ತಿಗೆ ಗತವೈಭವವನ್ನು ಮರಳಿಸಬೇಕಿದೆ. ರಾಜ್ಯಾಧ್ಯಕ್ಷರು ಇದಕ್ಕೆ ಸಹಕಾರ ನೀಡಬೇಕು.
- ಗಂಜಾಂ ಮಂಜು, ಪದಾಧಿಕಾರಿ