ಸಾರಾಂಶ
ತೀರ್ಥಹಳ್ಳಿ: ವಿಶೇಷ ಚೇತನ ಮಕ್ಕಳನ್ನು ಶಾಪವೆಂದು ಪರಿಗಣಿಸಬಾರದು. ದೈಹಿಕವಾಗಿ ಅಸಮರ್ಥರಾಗಿದ್ದರೂ ಅವರಲ್ಲೂ ವಿಶೇಷ ಪ್ರತಿಭೆಗಳು ಅಡಗಿರುತ್ತವೆ. ವಿಶೇಷ ಚೇತನ ಮಕ್ಕಳ ಅತ್ಯಂತ ಅಪರೂಪವಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು ಹೃದಯಸ್ಪರ್ಷಿಯಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳಲ್ಲಿ ಒಂದು ವಿಶೇಷತೆ ಹಾಗೂ ಮಕ್ಕಳ ಪೋಷಕರ ಸನ್ಮಾನ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ಸರ್ಕಾರ ಇಂತಹಾ ಮಕ್ಕಳ ಕಲಿಕೆಗೆ ಪೂರಕವಾಗಿ ತಾಲೂಕು ಕೇಂದ್ರಗಳಲ್ಲೂ ಅಗತ್ಯ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದರು.ಈ ಮಕ್ಕಳಲ್ಲೂ ಪ್ರತಿಭೆ ಅಡಗಿದ್ದು, ಎಲ್ಲರಂತೆ ಇವರಲ್ಲೂ ಪ್ರತಿಭೆ ಅಡಗಿದೆ ಎಂಬುದಕ್ಕೆ ಇದಕ್ಕೆ ಇಂದಿಲ್ಲಿ ಪ್ರದರ್ಶನಗೊಂಡಿರುವ ಕಲಾಕೃತಿಗಳ ಪ್ರದರ್ಶನ ಉದಾಹರಣೆಯಾಗಿದೆ. ಇವರನ್ನು ಪ್ರೀತಿಯಿಂದ ಕಾಣುವುದು ಅಗತ್ಯ ಜೀವಮಾನ ಪೂರ್ತಿ ಈ ಮಕ್ಕಳ ಲಾಲನೆ, ಪಾಲನೆಯಲ್ಲಿ ತೊಡಗಿರುವ ಪೋಷಕರ ಪ್ರೀತಿ ವಾತ್ಸಲ್ಯವನ್ನು ವರ್ಣಿಸಲು ಶಬ್ದಗಳೇ ಇಲ್ಲಾ. ಈ ಮಕ್ಕಳ ಆರೈಕೆ ಮತ್ತು ಕಲಿಕೆಗೆ ಪೂರಕವಾಗಿ ತಾಲೂಕಿನಲ್ಲಿ ವ್ಯವಸ್ಥಿತವಾದ ಸೌಲಭ್ಯವನ್ನು ಕಲ್ಪಿಸಲು ದಾನಿಗಳ ನೆರವಿನೊಂದಿಗೆ ಪ್ರಯತ್ನಿಸುವುದಾಗಿಯೂ ತಿಳಿಸಿದರು.ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ದೇವರು ವರವನ್ನು ಕೊಡಲ್ಲಾ ಶಾಪವನ್ನೂ ಕೊಡೊಲ್ಲಾ. ಆದರೆ ವಿಕಲಚೇತನ ಮಕ್ಕಳ ಪೋಷಕರು ಮಾತ್ರ ಇದನ್ನು ದೇವರು ನೀಡಿರುವ ವರ ಎಂದೇ ಭಾವಿಸಿ ಅಸಡ್ಡೆ ತೋರದೇ ಪ್ರೀತಿ ಮತ್ತು ಶ್ರದ್ಧೆಯಿಂದ ಕಾಣುತ್ತಿರುವುದು ಗಮನಿಸಬೆಕಾದ ಅಂಶವಾಗಿದೆ. ನ್ಯೂನತೆಯ ನಡುವೆಯೂ ಅವರಲ್ಲಿ ಪ್ರತಿಭೆಗಳು ಇರುತ್ತವೆ. ನಮ್ಮಲ್ಲಿ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಒಮ್ಮೊಮ್ಮೆ ಅಂಗವಿಕಲರಂತಾಗುತ್ತೇವೆ ಎಂದರು.ಹತ್ತನೇ ತರಗತಿಯ ವಿಶೇಷ ಚೇತನ ಬಾಲಕಿ ಇಂಚರಾ ಮಾತನಾಡಿ, ಎಲ್ಲರಂತೇ ನಮಗೇ ನಮದೇ ಆದ ಭಾವನೆ ಮತ್ತು ನಿರೀಕ್ಷೆಗಳಿವೆ. ನಮಗೆ ಅನುಕಂಪ ಬೇಡ. ಎಲ್ಲರಂತೆ ನಮ್ಮನ್ನೂ ಕಾಣಬೇಕಿದೆ. ಇಂದಿಲ್ಲಿ ನಡೆದಿರುವ ಕಾರ್ಯಕ್ರಮ ನಮಗೆ ವಿಶೇಷ ಆತ್ಮಸ್ಥೈರ್ಯವನ್ನು ಮೂಡಿಸಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಡಾ.ರಾಹುಲ್ ದೇವರಾಜ್ ಮಾತನಾಡಿದರು. ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಚೇತನ ಮಕ್ಕಳಿಗೆ ವಿವಿಧ ಛದ್ಮವೇಷಗಳನ್ನು ಹಾಕಲಾಗಿತ್ತು.ಉಪಾಧ್ಯಕ್ಷೆ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಪಪಂ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ ಶೆಟ್ಟಿ, ಅಕ್ಷರ ದಾಸೋಹ ಇಲಾಖೆಯ ಪ್ರವೀಣ್, ದಿವಾಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ, ಮಹಾಬಲೇಶ್ವರ ಹೆಗ್ಡೆ, ಶಿಕ್ಷಕರ ಸಂಘದ ಜಿ.ಕೆ.ಗಿರಿರಾಜ್, ಬಿ.ರಾಮು,ಕೆ.ವಿ.ಪುಟ್ಟಪ್ಪ ವೇದಿಕೆಯಲ್ಲಿದ್ದರು.
ಸಮನ್ವಯ ಸಂಪನ್ಮೂಲ ಶಿಕ್ಷಕರಾದ ಹನುಮಂತಪ್ಪ, ಕವಿತಾ ಸುಧೀಂದ್ರ ಮತ್ತು ಕುಬೇರಪ್ಪ ಕಾರ್ಯಕ್ರಮ ನಿರ್ವಹಿಸಿದರು.