ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಸರಬರಾಜು ಸಮರ್ಪಕವಾಗಿ ಸಾಗುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಗ್ಯಾಸ್‌ ಏಜೆನ್ಸಿಗಳ ಮುಂದೆ ಜನಸಂದಣಿ ಸೇರುವಂತಹ ಸನ್ನಿವೇಶವನ್ನು ಏಜೆನ್ಸಿಗಳು ಸೃಷ್ಟಿಸಬಾರದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಸರಬರಾಜು ಸಮರ್ಪಕವಾಗಿ ಸಾಗುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಗ್ಯಾಸ್‌ ಏಜೆನ್ಸಿಗಳ ಮುಂದೆ ಜನಸಂದಣಿ ಸೇರುವಂತಹ ಸನ್ನಿವೇಶವನ್ನು ಏಜೆನ್ಸಿಗಳು ಸೃಷ್ಟಿಸಬಾರದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಐಒಸಿ, ಬಿಪಿಸಿ ಹಾಗೂ ಹೆಚ್ಪಿಸಿ ಕಂಪನಿಗಳ ಸೇಲ್ಸ್ ಆಫೀಸರ್ಸ್‌, ಎಲ್‌ಪಿಜಿ ಡೀಲರ್ಸ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಮಾತನಾಡಿದ ಅವರು, ಗೃಹಬಳಕೆಯ ಸಿಲಿಂಡರ್‌ಗಳನ್ನು ನಗರ ಪ್ರದೇಶಗಳಲ್ಲಿ 25 ದಿನಗಳ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆಯೇ ಎಲ್ಲವೂ ನಡೆಯಬೇಕು. ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು. ವಾಣಿಜ್ಯ ಬಳಕೆಯ ನೋಂದಾಯಿತ ಗ್ರಾಹಕರಿಗೆ ಅವರ ಬೇಡಿಕೆಗೆ ಅನುಸಾರ ಸರಬರಾಜು ಕಂಪನಿಗಳಿಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಿದಲ್ಲಿ ಬೇಡಿಕೆಗೆ ಅನುಸಾರ ಇಂಧನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಡಳಿತವು ಐಒಸಿ, ಬಿಪಿಸಿ ಹಾಗೂ ಎಚ್‌ಪಿಸಿ ಮೂರು ಕಂಪನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಬೇಡಿಕೆಗೆ ಅನುಸಾರವಾಗಿ ಈ ಮೂರು ಕಂಪನಿಗಳು ಪೂರೈಸಲು ಸಿದ್ಧವಾಗಿವೆ. ಪ್ರತಿದಿನ ಅಂದಾಜು 9 ಸಾವಿರ ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ಗೃಹಬಳಕೆಯ ಸಿಲಿಂಡರ್‌ಗಳಿಗೆ ಸಮಸ್ಯೆ ಇಲ್ಲ. ಅಧಿಕೃತ ನೋಂದಾಯಿತ ವಾಣಿಜ್ಯ ಕಂಸ್ಯುಮರ್ಸ್‌ ಬೇಡಿಕೆ ಇಟ್ಟಲ್ಲಿ ಅಂತವರಿಗೆ ಮಾತ್ರ ಸಿಲಿಂಡರ್‌ಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮಧ್ಯಾಹ್ನ ಬಿಸಿ ಊಟ, ಹಾಸ್ಟೇಲ್ ಹಾಗೂ ಇತರೆ ಸರ್ಕಾರಿ ಯೋಜನೆಯಡಿ ಅನಿಲ ಸಂಪರ್ಕ ಹೊಂದಿದಲ್ಲಿ ಆದ್ಯತೆ ಮೇಲೆ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಅನಧಿಕೃತವಾಗಿ ಎಲ್‌ಪಿಜಿ ಸಿಲಿಂಡರ್‌ ದಾಸ್ತಾನು ಮಾಡುವ ಮತ್ತು ರಿಫಿಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಸಿಲಿಂಡರ್ ರಶೀದಿ ಮೇಲೆ ಇರುವ ಮೊತ್ತವನ್ನೇ ಪಾವತಿಸಬೇಕು. ರಶೀದಿ ಮೇಲಿರುವ ಮೊತ್ತಕಿಂತ ಹೆಚ್ಚಿನ ಮೊತ್ತ ಕೇಳಿ ಪಡೆದರೆ, ಐಒಸಿ ಕಂಪನಿಯ ಶ್ರೀನಿವಾಸ (9448285589), ಬಿಪಿಸಿ ಕಂಪನಿಯ ಸ್ಪಂದನ (8308955566), ಎಚ್‌ಪಿಸಿ ಕಂಪನಿಯ ವಸಂತ (94833521035), ಆರ್‌ಬಿಎಂಎಲ್‌ನ ಕೇದಾರ (9148175566), ನಯರಾ ಕಂಪನಿಯ ಅವಿನ ಲೋಬೋ (6360370760), ಎಂಆರ್‌ಪಿಸಿಯ ರವಿಚಂದ್ರ (8150970425), ಜಿಲ್ಲಾಧಿಕಾರಿಗಳ ಆಹಾರ ವಿಭಾಗ (08354-235094), ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ (112)ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯಲ್ಲಿ ಇಂಧನದ ಅಭಾವ ಇಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ 4,78,596 ಗೃಹ ಬಳಕೆಯ ಸಿಲಿಂಡರ್‌ ಸಂಪರ್ಕಗಳಿದ್ದು, ಗ್ರಾಹಕರು ಮಿತವಾಗಿ ಬಳಕೆ ಮಾಡಲು ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರರು ಇದ್ದರು.----------