ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಈ ಪದವಿಯನ್ನು ಬಿಟ್ಟು ಹೋಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ನನಗೆ ಭರವಸೆ ಇದೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.ನಗರದ ಹೊರವಲಯದಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಕೃಷಿ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ವರ್ಷದ ಕೃಷಿ ಪದವಿಯ ಎಲ್ಲಾ ಆಯಾಮಗಳನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೃಷಿ ಪದವಿಗೆ ಭವಿಷ್ಯದಲ್ಲಿ ಇರುವ ಎಲ್ಲಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.ಶಿಕ್ಷಣ ನಿರ್ದೇಶಕ ಡಾ.ವಿ.ಆರ್.ಕಿರೇಸೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಉಪದೇಶಿಸಿದರು. ಆರೋಗ್ಯಕರವಾದ ಆಹಾರ ಸೇವಿಸುವ ಮೂಲಕ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಆರೋಗ್ಯಕರ ವಿದ್ಯಾರ್ಥಿ ಜೀವನವನ್ನು ನಡೆಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಮಹಾವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು ಹಾಗೂ ತಾವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅತೀ ಮುತುವರ್ಜಿಯನ್ನು ವಹಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಮನಗೂಳಿ ವಿರಕ್ತಮಠದ ವಿತೀಶಾನಂದ ಸ್ವಾಮಿಗಳು ಮಾತನಾಡಿ, ದೀಕ್ಷೆ ಎಂಬ ಪದದ ಅರ್ಥದಿಂದ ಹಿಡಿದು ಜ್ಞಾನದ ಮಹಿಮೆ, ಜ್ಞಾನವನ್ನು ಗಳಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ತಮ್ಮನ್ನು ಆಕರ್ಷಿಸುವ ಎಲ್ಲಾ ಮಾಯೆಗಳಿಂದ ದೂರವಿದ್ದು, ಕೇವಲ ಜ್ಞಾನಗಳಿಸುವತ್ತ ತಮ್ಮ ಚಿತ್ತವನ್ನು ಇರಿಸಬೇಕು ಎಂದು ಸಲಹೆ ನೀಡಿದರು.ಕೃಷಿಯ ಮಹತ್ವವನ್ನು ತಿಳಿಸುವುದರ ಜೊತೆಯಲ್ಲೇ ಎಲ್ಲರಿಂದ ಕಬೀರರ ವಚನಗಳನ್ನು ಹೇಳಿಸುವುದರ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿ ಆಶೀರ್ವಚನ ನೀಡಿದರು. ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಎ.ಭೀಮಪ್ಪ ದೀಕ್ಷಾರಂಭ ಕಾರ್ಯಕ್ರಮದ ಅಂಗವಾಗಿ ಮಹಾವಿದ್ಯಾಲಯದಲ್ಲಿ ಜರುಗಿದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಿಂದ ಮಹಾವಿದ್ಯಾಲಯದ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು. ಕೃಷಿ ಉದ್ದಿಮೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು 2 ಯಶಸ್ವಿ ಕೃಷಿ ಉದ್ದಿಮೆದಾರರನ್ನು ಆಹ್ವಾನಿಸಲಾಗಿತ್ತು.
ಬೀಜೋತ್ಪಾದನೆ ಮತ್ತು ದಾಲ್ ಮಿಲ್‌ಗಳಲ್ಲಿ ಯಶಸ್ಸು ಕಂಡಿರುವ ರವಿಂದ್ರ ಲೋಣಿ ತಮ್ಮ ಜೀವನದ ಯಶೋಗಾಥೆಯನ್ನು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟರು. ಕೃಷಿ ಮತ್ತು ಕೃಷಿ ಸಂಬಂಧಿತ ಉದ್ದಿಮೆಗಳಲ್ಲಿ ಕಷ್ಟಪಡದೆ ಸಫಲತೆಯನ್ನು ಕಾಣಲು ಸಾಧ್ಯವಿಲ್ಲ ಎಂಬ ಕಿವಿಮಾತು ಹೇಳಿದರು.ಹಲವಾರು ಕೃಷಿ ಉದ್ಯಮಗಳು ಹಾಗೂ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ತೊಡಗಿಸಿಕೊಂಡಿರುವ ಕೃಷಿ ಉದ್ಯಮಿ ವಿಠಲ ಬಿರಾದಾರ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಲು ಏನೆಲ್ಲಾ ಅಡೆತಡೆಗಳು ಬರುತ್ತವೆ. ಅವುಗಳನ್ನು ಮೀರಿ ಹೇಗೆ ಯಶಸ್ವಿನೆಡೆಗೆ ಸಾಗಬೇಕು ಎಂದು ವಿವರಿಸುವ ಜೊತೆಯಲ್ಲೇ ಕಡಿಮೆ ಅಂಕಗಳನ್ನು ಪಡೆದು ಧೈರ್ಯ ಕಳೆದುಕೊಳ್ಳದೇ ಯಶಸ್ವಿಯಾಗಲು ಹಲವಾರು ಮಾರ್ಗಗಳಿವೆ ಎಂದು ಸಲಹೆಗಳನ್ನು ನೀಡಿದರು.
ಮುಖ್ಯ ಶಿಕ್ಷಣ ಸಲಹೆಗಾರರಾದ ಡಾ.ಸುನೀತಾ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಗೋಟ್ಯಾಳ ವಂದಿಸಿದರು. ಸಹಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ, ಸಹವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.