ಸರ್ಕಾರಿ ಶಾಲೆ ಕೆಡವಿ ಪುರಸಭೆ ಕಟ್ಟಡ ನಿರ್ಮಿಸಬೇಡಿ

| Published : Aug 09 2025, 02:04 AM IST

ಸಾರಾಂಶ

ಪುರಸಭೆ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿರುವ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಉಳಿಸಿ, ಯಥಾ ಸ್ಥಳದಲ್ಲಿಯೇ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸೊರಬ: ಪುರಸಭೆ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿರುವ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಉಳಿಸಿ, ಯಥಾ ಸ್ಥಳದಲ್ಲಿಯೇ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸೇನೆಯ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ೧೮೫೬ರಲ್ಲಿ ಆರಂಭಗೊಂಡಿದೆ. ಸುಮಾರು ಒಂದೂವರೆ ಶತಮಾನದ ಇತಿಹಾಸ ಇರುವ ಶಾಲೆಯನ್ನು ತೆರವುಗೊಳಿಸುವುದು ಸಲ್ಲದು. ಸ್ವಾತಂತ್ರ್ಯ ಪೂರ್ವದಿಂದಲೂ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿದೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಮಕ್ಕಳಿಗೆ ದಾರಿ ದೀಪವಾಗಿದೆ. ಈ ಶಾಲೆಯಲ್ಲಿ ಕಲಿತವರು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಮೂಲಕ ಶಾಲೆಯು ತಾಲೂಕಿಗೆ ಕೀರ್ತಿಯನ್ನು ತಂದಿದೆ. ನೆನಪಿನ ಇತಿಹಾಸ ಹೊಂದಿರುವ ಶಾಲಾ ಕಟ್ಟಡವನ್ನು ನೆಲಸಮ ಮಾಡಿ ಪುರಸಭೆ ಕಚೇರಿಯನ್ನು ನಿರ್ಮಾಣ ಮಾಡುವುದನ್ನು ಕರವೇ ಕನ್ನಡ ಸೇನೆ ಖಂಡಿಸುತ್ತದೆ ಎಂದರು. ಶಾಲೆಯ ಜಮೀನು ಮತ್ತು ಕಟ್ಟಡವನ್ನು ಶೈಕ್ಷಣಿಕ ಚಟುವಟಿಕೆಗೆ ಬಳಕೆ ಮಾಡಬೇಕೇ ವಿನಃ ಇತರೆ ಇಲಾಖೆಗೆ ವರ್ಗಾವಣೆ ಮಾಡುವುದು ಸಮಂಜಸವಲ್ಲ. ಪುರಸಭೆಯ ನಡೆ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅತೀವ ನೋವನ್ನು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿದ ಶಾಲೆಯು ಹಳೇಯ ವಿದ್ಯಾರ್ಥಿಗಳ ಭಾವನಾತ್ಮಕ ಶಕ್ತಿಯಾಗಿದೆ. ಶಾಲೆಯ ಸ್ವತ್ತನ್ನು ಯಾವುದೇ ಸಂದರ್ಭದಲ್ಲಿಯೂ ಶೈಕ್ಷಣೇತರ ಚಟುವಟಿಕೆಗೆ ನೀಡಬಾರದು. ಒಂದು ವೇಳೆ ನೀಡಿದ್ದಲ್ಲಿ ಸಂಘಟನೆಯ ಜೊತೆಗೆ ಹಳೇ ವಿದ್ಯಾರ್ಥಿಗಳ ಜೊತೆಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಕನ್ನಡಸೇನೆ ಗೌರವಾಧ್ಯಕ್ಷ ಇ.ನಾಗರಾಜ್, ಪ್ರಮುಖರಾದ ಕೆ.ಪಿ.ಶ್ರೀಧರ ನೆಮ್ಮದಿ, ಎಸ್.ರಾಘವೇಂದ್ರ, ಶಿವಯೋಗಿ ಸ್ವಾಮಿ ಸುತ್ತೂರುಮಠ, ಎಂ.ಎಸ್.ಚೇತನ್, ಲಿಂಗರಾಜ ನೇರಲಗಿ, ಶ್ರೀನಿವಾಸ ನಾಯ್ಕ, ಅರುಣ್, ಕೇಶವ ಇತರರಿದ್ದರು.