ಸಾರಾಂಶ
ಕನ್ನಡ ಪ್ರಭ ವಾರ್ತೆ ತರೀಕೆರೆ
ಇಂದು ಬೇಕು ಬೇಕು ಎನ್ನುವುದಕ್ಕೆ ಬ್ರೇಕೆ ಇಲ್ಲದಂತಾಗಿ ಅತೀ ವೇಗವಾಗಿ ಸಂಪತ್ತು ಗಳಿಸಲು ವಾಮಮಾರ್ಗ ಮತ್ತು ಭ್ರಷ್ಟಾಚಾರದಿಂದ ಹಣ ಸಂಪಾದನೆ ಮಾಡುತ್ತಿರುವುದು ಎಲ್ಲಾ ಕ್ಷೇತ್ರಗಳಲ್ಲೂ ವಿಪರೀತವಾಗುತ್ತಿದೆ ಎಂದು ಸಾಣೇಹಳ್ಳಿ ಶ್ರೀ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.ಪಟ್ಟಣದ ಹಳಿಯೂರು ಗ್ರಾಮದ ಬಳಿಯ ಗಂಧದಗುಡಿ -2ರಲ್ಲಿ ಯಶಸ್ವಿನಿ ಚಾರಿಟಬಲ್ ಟ್ರಸ್ಟ್ ನಿಂದ 20ನೇ ವರ್ಷದ ಶ್ರೀಗಂಧ ಹುಟ್ಟುಹಬ್ಬ, ಶ್ರೀಗಂಧ- ವನಕೃಷಿ ಬೆಳೆಗಾರರ ಸಮಾವೇಶ ಮತ್ತು ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಮಾತನಾಡಿದರು,
ಜನರ ಸಮಸ್ಯೆಗಳನ್ನು ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸುವ ಸೌಜನ್ಯವೇ ಹೊರಟು ಹೋಗಿದೆ. ಅದರ ಬದಲಾಗಿ ಭ್ರಷ್ಟಾಚಾರ ಮೀತಿ ಮೀರುತ್ತಿದೆ. ಇಂದು ಎಲ್ಲಿಗೆ ಹೋಗುತ್ತಿದೆ ದೇಶದ ಸ್ಥಿತಿ. ನಾವೆಲ್ಲರೂ ಭಾರತೀಯರು. ಧರ್ಮದ ನಾಡಿನವರು. ಆಧ್ಯಾತ್ಮದ ಬೀಡಿನವರು. ಇಲ್ಲಿ ಸತ್ಯವನ್ನು ಎತ್ತಿ ಹಿಡಿದ ಹರಿಶ್ಚಂದ್ರ ಹುಟ್ಟಿದ ನಾಡು. ಬಸವಾದಿ ಶರಣರು ಬೆಳೆದ ನಾಡು, ಗಾಂಧೀಜಿ ಸತ್ಯ ಪರಿಪಾಲನೆಗೆ ಹೋರಾಡಿದವರು. ಇವರೆಲ್ಲರ ಆದರ್ಶ ಗಾಳಿಗೆ ತೂರಿ ನಾವು ಹೇಗೆ ಹಣ ಸಂಪಾದಿಸಬೇಕು ಎಂದು ಆಲೋಚನೆ ಮಾಡುವಂತ ಸ್ಥಿತಿ ಬಂದಿದೆ ಎಂದು ಹೇಳಿದರು.ಪರಿಸರವನ್ನು ನಾವು ರಕ್ಷಣೆ ಮಾಡಿದರೆ, ನಮ್ಮನ್ನು ಪರಿಸರ ರಕ್ಷಣೆ ಮಾಡುತ್ತದೆ. ಪರಿಸರವನ್ನು ನಾವು ಹಾಳು ಮಾಡಿದರೆ, ಅದು ನಮ್ಮ ಅವನತಿಗೆ ಕಾರಣ. ಪ್ರಗತಿಯ ಹೆಸರಿನಲ್ಲಿ ಪರಿಸರ ಹಾಳುಮಾಡಬಾರದು, ಪ್ರಗತಿ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳುವುದು ತುಂಬಾ ಅವಮಾನ ಮಾಡಿದಂತಾಗುತ್ತದೆ. ರೈತರು ಬೆಳೆ ಬೆಳೆಯದಿದ್ದರೆ ನಾವ್ಯಾರು ಊಟ ಮಾಡಲು ಆಗುವುದಿಲ್ಲ. ರೈತರು ಸಹ ಇಂದು ಆಹಾರ ಪದಾರ್ಥಗಳನ್ನು ಬಿಟ್ಟು ಅಡಕೆ ಮತ್ತು ಇನ್ನಿತರೆ ಹೆಚ್ಚು ಆದಾಯ ಬರುವಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಮೊದಲು ನಮ್ಮ ದುರಾಸೆ ಕಡಿಮೆ ಮಾಡಿಕೊಳ್ಳಬೇಕು. ಸರಳವಾಗಿ ಬದುಕಬೇಕುವುದನ್ನು ರೂಢಿಸಿ ಕೊಳ್ಳಬೇಕು. ಇಂತ ಸಂದರ್ಭಗಳಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ ಉಳಿಸಿಕೊಳ್ಳಬೇಕಾಗಿದೆ. ನಾವು ಲೋಕ ಬಿಟ್ಟು ಹೋಗುವಾಗ ಯಾವ ಸಂಪತ್ತು ನಮ್ಮ ಹಿಂದೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಜನ ಆದರ್ಶದ ದಾರಿಯಲ್ಲಿ ನಡೆಯಬೇಕೆನ್ನಿಸುತ್ತದೆ ಎಂದು ಹೇಳಿದರು.ರಸ್ತೆ ನಿರ‍್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇಲ್ಲಿನ ಶ್ರೀಗಂಧ ಬೆಳೆಗಾರರ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿರುವುದನ್ನು ನಾವೆಲ್ಲರು ಸರ್ಕಾರದ ಜೊತೆ ಮಾತುಕತೆ ನಡೆಸಿ ಪರಿಹರಿಸುವಲ್ಲಿ ಪ್ರಯತ್ನಿ ಸೋಣ. ಶ್ರೀಗಂಧ ಬೆಳೆಗಾರ ಟಿ.ಎನ್. ವಿಶುಕುಮಾರರಂತೆ ಪ್ರತಿಯೊಬ್ಬರು ತಮ್ಮ ಕುಟುಂಬದ ಸದಸ್ಯರ ಹುಟ್ಟು ಹಬ್ಬದಂದು ಒಂದೊಂದು ಸಸಿಗಳನ್ನು ನೆಡುವುದನ್ನು ರೂಢಿಸಿಕೊಂಡರೆ ಪರಿಸರ ರಕ್ಷಣೆಗೆ ಕೈ ಜೋಡಿಸಿದಂತಾಗುತ್ತದೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆ ವರಿಷ್ಠರು ಕೆ.ಟಿ. ಗಂಗಾಧರ್ ಮಾತನಾಡಿ ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಿದರು.ಸಮಿತಿ ರಾಜ್ಯ ಉಪಾಧ್ಯಕ್ಷ ಷಣ್ಮುಖಪ್ಪ, ತಾಲೂಕು ಅಧ್ಯಕ್ಷ ಶಿವರಾಜ್, ವಿಜ್ಞಾನಿ ಅನಂತಪದ್ಮನಾಭ ಮಾತನಾಡಿದರು. ಎ.ಸಿ. ಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷರಾದ ಟಿ.ಆರ್. ನಾಗರಾಜ, ಗಿರಿಜಮ್ಮ ನಾಗರಾಜ್, ಅಶ್ವಿನಿ, ಜಯಣ್ಣ, ಚಂದ್ರಪ್ಪ, ನವೀನ್, ದೀಪು, ಯೋಗೀಶ, ಸುಬ್ರಹ್ಮಣ್ಯ, ಕಿರಣ್, ಟಿ.ಎನ್. ರಘು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಭಕ್ತನಕಟ್ಟೆ ಲೋಕೇಶ್ ಮತ್ತು ತಂಡದವರಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.